ಸಮಗ್ರ ನ್ಯೂಸ್: ಬರೀ ಭಾವನಾತ್ಮಕ ವಿಚಾರಗಳನ್ನೇ ಮುಂದಿಟ್ಟುಕೊಂಡು ಕಳೆದ ಹತ್ತು ವರ್ಷಗಳಿಂದ ಅಭಿವೃದ್ಧಿ ಕಾರ್ಯದಲ್ಲಿ ವಿಫಲರಾಗಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ಜಿಲ್ಲೆಯ ಶಾಸಕರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲವೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಈ ಹಿಂದಿನ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗು ಜಿಲ್ಲೆಯ ಅಭಿವೃದ್ಧಿಗೆಂದು 15 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ 10 ಕೋಟಿ ರೂ.ಗಳ ಅನುದಾನವನ್ನು ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಬಿಡುಗಡೆಗೊಳಿಸಲಾಗಿತ್ತು. ಈ ಅನುದಾನ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ. ಕೊಡವ ಅಭಿವೃದ್ಧಿ ನಿಗಮವೇ ಸ್ಥಾಪನೆಯಾಗದಿರುವಾಗ ಅನುದಾನ ಬರುವುದಾದರೂ ಹೇಗೆಂದು ಸಂಸದ ಪ್ರತಾಪ್ ಸಿಂಹ ಅವರೇ ಉತ್ತರಿಸಬೇಕೆಂದು ಧರ್ಮಜ ಉತ್ತಪ್ಪ ತೀಕ್ಷ್ಣವಾಗಿ ನುಡಿದರು. ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ಮಾತನಾಡಿ, ಕೊಡಗಿನಲ್ಲಿ ಆನೆ ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಸಚಿವರನ್ನು ಕಾಡಾನೆ ಹಾವಳಿ ಪೀಡಿತ ಪ್ರದೇಶಗಳಿಗೆ ಬರಮಾಡಿಕೊಂಡು ಸಮಸ್ಯೆಯ ಗಂಭೀರತೆಯನ್ನು ಸಚಿವರಿಗೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಮನದಟ್ಟು ಮಾಡುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಶ್ರಮಿಸಿದ್ದಾರೆ. ಜಿಲ್ಲೆಯ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸದೇ, ಕೋವಿಡ್ ಸಂದರ್ಭ ಸಂಕಷ್ಟಕ್ಕೊಳಗಾದವರಿಗೆ ಯಾವುದೇ ಸ್ಪಂದನೆ ತೋರದ ಸಂಸದ ಪ್ರತಾಪ್ ಸಿಂಹ ಅವರು, ಕೊಡಗಿಗೆ ರೈಲು ಬರುತ್ತದೆ ಎಂದು ರೈಲ್ ಬಿಟ್ಟಿದ್ದೇ ಹೆಚ್ಚು ಎಂದು ವ್ಯಂಗ್ಯವಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸತೀಶ್ ವಿರಾಜಪೇಟೆ, ಕೊಲ್ಯದ ಗಿರೀಶ್, ಹೆಚ್.ಎ.ಹಂಸ ಉಪಸ್ಥಿತರಿದ್ದರು.