Ad Widget .

ಭಕ್ತ ಕನಕದಾಸರ ಕೀರ್ತನೆಗಳು ಮತ್ತು ಚಿಂತನೆಗಳು ಸಾರ್ವಕಾಲಿಕ: ಡಾ.ಮಂತರ್ ಗೌಡ

ಸಮಗ್ರ ನ್ಯೂಸ್: ಕನ್ನಡ ನಾಡಿನ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಭಕ್ತ ಕನಕದಾಸರ ಕೊಡುಗೆ ಅಪಾರವಾಗಿದ್ದು, ಕನಕದಾಸರ ಚಿಂತನೆಗಳು ಸಾರ್ವಕಾಲಿಕವಾಗಿವೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಹೇಳಿದರು.

Ad Widget . Ad Widget .

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊಡಗು ಜಿಲ್ಲಾ ಕುರುಬ ಸಮಾಜದ ಸಹಕಾರದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ‘ಕನಕದಾಸರ ಜಯಂತ್ಯುತ್ಸವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Ad Widget . Ad Widget .

ಇಂದಿನ ಮೊಬೈಲ್ ತಂತ್ರಜ್ಞಾನ ಯುಗದಲ್ಲಿಯೇ ಸಮಾಜದಲ್ಲಿ ಹಲವು ತಾರತಮ್ಯಗಳನ್ನು ನೋಡುತ್ತೇವೆ. ಆ ನಿಟ್ಟಿನಲ್ಲಿ ಹಲವು ಶತಮಾನಗಳ ಹಿಂದೆ ಬಸವಣ್ಣ, ಅಲ್ಲಮಪ್ರಭು ಸೇರಿದಂತೆ ಹಲವು ವಚನಕಾರರು, ಹಾಗೆಯೇ ದಾಸ ಶ್ರೇಷ್ಠ ಕನಕದಾಸರು ಸೇರಿದಂತೆ ಹಲವರು ಸಾಮಾಜಿಕ ನ್ಯೂನತೆಗಳನ್ನು ಸರಿಪಡಿಸಲು ಶ್ರಮಿಸಿರುವುದು ಶ್ಲಾಘನೀಯ ಕಾರ್ಯ. ಆ ನಿಟ್ಟಿನಲ್ಲಿ ಸಾಹಿತ್ಯ, ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ ಎಂದು ಡಾ.ಮಂತರ್ ಗೌಡ ಅವರು ಹೇಳಿದರು.
ಶರಣರು, ದಾಸರ ವಿಚಾರ ಧಾರೆಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು. ದಾಸರ ಕೀರ್ತನೆಗಳು ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವಲ್ಲಿ ಸಹಕಾರಿಯಾಗಿವೆ. ಅನ್ಯಾಯದ ವಿರುದ್ದ ಬೆಳಕು ಚೆಲ್ಲುವುದನ್ನು ಕಾಣುತ್ತೇವೆ. ಭಕ್ತಿ, ಶ್ರದ್ಧೆ, ಜ್ಞಾನ ಹೀಗೆ ಪ್ರತಿಯೊಂದು ಸಹ ಸಮತೋಲನದಿಂದ ಕೂಡಿದಾಗ ಉತ್ತಮ ಬದುಕು ನಡೆಸಲು ಸಾಧ್ಯ. ವಿದ್ಯಾರ್ಥಿಗಳು ವಿದ್ಯಾರ್ಜನೆ ಕಡೆ ಹೆಚ್ಚಿನ ಗಮನಹರಿಸಬೇಕು. ಉತ್ತಮ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು ಎಂದು ಶಾಸಕರು ನುಡಿದರು.

‘ಜಿಲ್ಲೆಯ ಸೂಕ್ತ ಸ್ಥಳದಲ್ಲಿ ಕುರುಬ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಆ ನಿಟ್ಟಿನಲ್ಲಿ ಕೂಡಲೇ ಜಾಗ ಒದಗಿಸಲಾಗುವುದು ಎಂದರು.’

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಶರಣರು ಹಾಗೂ ದಾಸರ ಕೊಡುಗೆ ಅಪಾರ ಎಂದರು.

‘ಕನಕದಾಸರು ಶೋಷಿತ ಜನರ ಬಗ್ಗೆ ಕೀರ್ತನೆ ಮೂಲಕ ಬೆಳಕು ಚೆಲ್ಲಿದ್ದಾರೆ. ಭಕ್ತ ಕನಕದಾಸ ಚಲನಚಿತ್ರದ ಮೂಲಕ ಕನಕದಾಸರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳಬಹುದಾಗಿದೆ ಎಂದು ಹೇಳಿದರು.’
ಮೋಹನತರಂಗಿಣಿ, ನಳಚರಿತ್ರೆ, ಮೊದಲಾದ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ. ಕನಕದಾಸರು ಸಮಾಜಕ್ಕೆ ತನ್ನದೇ ಆದ ಸಂದೇಶಗಳನ್ನು ನೀಡಿದ್ದಾರೆ. ಅವುಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದರು.
ಹುಣಸೂರು ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಂ.ಆರ್.ರಾಶಿ ಅವರು ಮಾತನಾಡಿ ಕನಕ ಎಂದರೆ ಚಿನ್ನ, ಭಕ್ತ ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.

ಸಮಾಜದಲ್ಲಿ ಮೌಡ್ಯವನ್ನು ಹೋಗಲಾಡಿಸಲು ಕನಕದಾಸರು ಪ್ರಯತ್ನಿಸಿದ್ದಾರೆ. ಕುಲಕುಲವೆಂದು ಹೊಡೆದಾಡದಿರಿ ಎಂಬ ಸಂದೇಶ ನೀಡಿದ್ದಾರೆ. ಕೀರ್ತನೆಗಳ ಮೂಲಕ ಬದುಕಿನ ಅಸಮತೋಲನ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದು ತಿಳಿಸಿದರು.
ಕನಕದಾಸರು ಸುಮಾರು 316 ಕ್ಕೂ ಹೆಚ್ಚು ಕೀರ್ತನೆಗಳನ್ನು ರಚಿಸಿದ್ದಾರೆ. ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧ್ಯಾನ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಕಾವ್ಯಕೃತಿಗಳ ಮೂಲಕ, ಕನಕದಾಸರು ತಮ್ಮ ವಿಶಿಷ್ಟ ಬರಹದಿಂದ ಇಂದಿಗೂ ಸಹ ಹೆಸರುವಾಸಿಯಾಗಿದ್ದಾರೆ ಎಂದು ಡಾ.ರಾಶಿ ಅವರು ಹೇಳಿದರು.
ಕನಕದಾಸರ ಕಾವ್ಯ ಕೃತಿಗಳಲ್ಲಿ ಒಂದಾದ ರಾಮಧ್ಯಾನ ಚರಿತೆಯು ಸಮಾಜದಲ್ಲಿನ ಅಂಕುಡೊಂಕುಗಳ ಬಗ್ಗೆ ಪ್ರಸ್ತುತಪಡಿಸಿದ್ದಾರೆ ಎಂದರು.
ಸಕಲಜೀವಿಗಳು ಸಹ ಬದುಕುವ ಹಕ್ಕು ಇದೆ ಎಂಬುದನ್ನು ಕನಕದಾಸರು ಪ್ರತಿಪಾದಿಸಿದ್ದಾರೆ. ವೈಜ್ಞಾನಿಕ ಚಿಂತನೆಯತ್ತ ಪ್ರತಿಯೊಬ್ಬರನ್ನೂ ಕೊಂಡೊಯ್ಯುತ್ತಾರೆ ಎಂದು ಹೇಳಿದರು.
ಕುರುಬ ಸಮಾಜದ ಪ್ರಮುಖರಾದ ನಂಜುಂಡಸ್ವಾಮಿ ಅವರು ಮಾತನಾಡಿ ಜನವರಿ, 03 ರಂದು ಮುಖ್ಯಮಂತ್ರಿ ಅವರು ಕೊಡಗು ಜಿಲ್ಲೆಗೆ ಆಗಮಿಸಲಿದ್ದು, ಕುಶಾಲನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಇದೇ ಸಂದರ್ಭದಲ್ಲಿ ಕೋರಿದರು.
ಭಕ್ತ ಕನಕದಾಸರು ‘ಬಾಗಿಲನು ತೆರೆದು, ಸೇವೆಯನು ಕೊಡೊ ಹರಿಯೇ’ ಎಂಬ ಕೀರ್ತನೆಯನ್ನು ಹಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇವರ ಕೀರ್ತನೆಗಳು ಭಾಮಿನಿ ಷಟ್ಪದಿಯಲ್ಲಿ ರಚಿಸಿರುವುದನ್ನು ಕಾಣಬಹುದಾಗಿದೆ ಎಂದರು. ಹುಣಸೂರು ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಆರ್.ರಾಶಿ ಅವರನ್ನು ಇದೇ ಸಂದರ್ಭದಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ತಹಶೀಲ್ದಾರ್ ಪ್ರವೀಣ್ ಕುಮಾರ್, ಕೊಡಗು ಜಿಲ್ಲಾ ಕುರುಬ ಸಂಘದ ಅಧ್ಯಕ್ಷರಾದ ಎಚ್.ಎಸ್.ಮಹೇಶ್, ಕೊಡಗು ಜಿಲ್ಲಾ ಕುರುಬ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ.ಗಂಗಾಧರ, ಉಪಾಧ್ಯಕ್ಷರಾದ ಟಿ.ಕೆ.ವಸಂತ, ಖಜಾಂಜಿ ಶಿವಣ್ಣ, ಪ್ರಮುಖರಾದ ಭರಮಣ್ಣ, ರವಿಗೌಡ, ಗಣೇಶ್ ಎಂ.ಟಿ., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ರೇಣುಕಾ ದೇವಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣಾಧಿಕಾರಿ ಮಹದೇವ ಸ್ವಾಮಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ಕೃಷ್ಣಪ್ಪ, ಭಾಗಮಂಡಲ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಲೋಕೇಶ್, ಹಿಂದುಳಿದ ವರ್ಗಗಳ ತಾಲ್ಲೂಕು ಅಧಿಕಾರಿ ಮೋಹನ್ ಕುಮಾರ್ ಇತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಕಲಾವಿದರ ಬಿ.ಸಿ.ಶಂಕರಯ್ಯ ಕನಕದಾಸರ ಕೀರ್ತನೆಗಳನ್ನು ಹಾಡಿ, ಮಣಜೂರು ಮಂಜುನಾಥ್ ನಿರೂಪಿಸಿ ವಂದಿಸಿದರು.

Leave a Comment

Your email address will not be published. Required fields are marked *