ಸಮಗ್ರ ನ್ಯೂಸ್: ಕಾರೊಂದರ ಮೇಲೆ ಕಾಡಾನೆ ದಾಳಿ ಮಾಡಿ ಇಬ್ಬರನ್ನು ಗಾಯಗೊಳಿಸಿ, ಕಾರಿಗೆ ಹಾನಿ ಉಂಟು ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯದ ಅಣಿಯೂರಿನಲ್ಲಿ ಸೋಮವಾರ ನ.27 ರಾತ್ರಿ ಸಂಭವಿಸಿದೆ.
ಕಾರಿನಲ್ಲಿ ಮಗು ಸಹಿತ ಏಳು ಮಂದಿಯಿದ್ದು ಅವರು ನೆರಿಯದ ಸಂಬಂಧಿಕರ ಮನೆಗೆ ಪ್ರಯಾಣಿಸುತ್ತಿದ್ದರು. ಪುತ್ತೂರು ಮೂಲದ ಅಬ್ದುಲ್ ರೆಹಮಾನ್ (40) ಮತ್ತು ನಾಸಿಯಾ (30) ಗಾಯಾಳುಗಳು ಎಂದು ತಿಳಿದು ಬಂದಿದೆ. ರೆಹಮಾನ್ ಅವರ ತಲೆ ಮತ್ತು ಕಾಲಿಗೆ ಹಾಗೂ ನಾಸಿಯಾ ಅವರ ಕಾಲಿಗೆ ಗಾಯವಾಗಿದ್ದು, ಅವರಿಗೆ ಕಕ್ಕಿಂಜೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ತೋಟತ್ತಾಡಿ ಪರಿಸರದಲ್ಲಿ ಸೋಮವಾರ ಬೆಳಗ್ಗೆ ಇದೇ ಕಾಡಾನೆ ಕಾಣಿಸಿದೆ. ಆಗ ಆನೆ ಶಾಂತವಾಗಿತ್ತು. ಆ ಪರಿಸರದಲ್ಲಿ ಓಡಾಡಿ ಯಾವುದೇ ಹಾನಿ ಎಸಗದೆ ಕಾಡಿಗೆ ತೆರಳಿತ್ತು. ಆದರೇ ರಾತ್ರಿಯ ವೇಳೆ ನೆರಿಯದ ಬಯಲು ಶಾಲೆಯ ಬಳಿ ಮತ್ತೆ ಆನೆ ಕಾಣಿಸಿಕೊಂಡಿದೆ. ಅದೆ ವೇಳೆ ರಸ್ತೆಯಲ್ಲಿ ಜೀಪ್ ಒಂದು ಹೋಗಿದ್ದು ಅದರ ಹೆಡ್ ಲೈಟ್ ಬೆಳಕು ಆನೆಯ ಕಣ್ಣಿಗೆ ಕುಕ್ಕಿದಂತಾಗಿದೆ. ತನ್ನ ಮೇಲೆ ಯಾರೋ ದಾಳಿ ಮಾಡಲು ಬಂದಿದ್ದಾರೆ ಅಂದು ಕೊಂಡ ಆನೆ ವ್ಯಗ್ರವಾಗಿದೆ.
ಈ ನಡುವೆ ಜನರು ಕೂಡ ಬೊಬ್ಬೆ ಹಾಕಿ, ಪಟಾಕಿ ಸಿಡಿಸಿ ಆನೆಯ ಸಿಟ್ಟನ್ನು ಇಮ್ಮಡಿಗೊಳಿಸಿದ್ದಾರೆ. ಇದರಿಂದಾಗಿ ಕೆರಳಿದ ಆನೆ ಪರಿಸರದ ಜನನಿಬಿಡ ಪ್ರದೇಶಗಳಲ್ಲಿ ಓಡಾಟ ನಡೆಸಿದೆ. ಒಬ್ಬರ ಮನೆಯಂಗಳಕ್ಕೂ ಹೋಗಿತ್ತು ಹಾಗೂ ರಸ್ತೆ ಬದಿ ಇರುವ ಮನೆಯೊಂದರ ಗೇಟನ್ನು ಮುರಿಯಲು ಯತ್ನಿಸಿತ್ತು. ಆಗ ಸುತ್ತಮುತ್ತಲ ಮನೆಯವರು ಬೊಬ್ಬೆ ಹೊಡೆದಿದ್ದರು.
ಕ್ರೋಧಿತ ಆನೆ ಆ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ತಿಳಿದಿದ್ದ ಸ್ಥಳೀಯರು ಆಗ ಆ ದಾರಿಯಾಗಿ ಬಂದ ಕಾರನ್ನು ಮುನ್ನೆಚ್ಚರಿಕೆ ದೃಷ್ಟಿಯಿಂದ ನಿಲ್ಲಿಸುವಂತೆ ಸೂಚಿಸಿದರು. ಕಾರನ್ನು ಕಟ್ಟಡವೊಂದರ ಬದಿಯಲ್ಲಿ ನಿಲ್ಲಿಸುವಷ್ಟರಲ್ಲಿ ಆನೆ ಅದೇ ಪರಿಸರಕ್ಕೆ ಆಗಮಿಸಿತ್ತು. ಕಾರಿನಲ್ಲಿದ್ದ ಕೆಲವರು ಅಷ್ಟರಲ್ಲಿ ಕೆಳಗೆ ಇಳಿದು ಪಕ್ಕದ ಮನೆಯಲ್ಲಿ ರಕ್ಷಣೆ ಪಡೆದರು.
ಆನೆಯು ದಾಡೆಯ ಮೂಲಕ ಕಾರನ್ನು ಕಟ್ಟಡದ ಗೋಡೆಗೆ ಗುದ್ದಿ ಜಖಂಗೊಳಿಸಿ ಅನಂತರ ಅಲ್ಲಿಂದ ಮನೆಯ ಕಾಂಪೌಂಡ್‌ಗೆ ನುಗ್ಗಿ ಅಲ್ಲಿಂದ ತೋಟಕ್ಕೆ ಹೋಗಿದೆ. ಬಳಿಕ ನದಿಯ ಪರಿಸರದಲ್ಲಿ ಕಂಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಕಾಡಿನತ್ತ ಅಟ್ಟಲು ಕ್ರಮ ಕೈಗೊಂಡಿದ್ದಾರೆ.