ಸಮಗ್ರ ನ್ಯೂಸ್ : ವೈಜ್ಞಾನಿಕ ಲೋಕಕ್ಕೆ ಸವಾಲಾಗಿ ಮಲೆನಾಡಿನ ಮಡಿಲಲ್ಲಿ ಅನೇಕ ಧಾರ್ಮಿಕ ವಿಸ್ಮಯಗಳು ನಡೆಯುತ್ತಿರುತ್ತವೆ. ಅವುಗಳ ಸರದಿಯಲ್ಲಿ ಬಗ್ಗಸಗೋಡು-ಬಾನಳ್ಳಿಯ ಅಂಚಿನಲ್ಲಿ ಉಣ್ಣಕ್ಕಿ ಹುತ್ತ ಹಲವು ವರ್ಷಗಳಿಂದ ಅಲುಗಾಡಿ ವಿಸ್ಮಯ ಸೃಷ್ಟಿಸುವ ಮೂಲಕ ಮನೆ ಮಾತಾಗಿದೆ.ಅಂದು ಸಹಸ್ರಾರು ಭಕ್ತರು ಅಲುಗಾಡುವ ಹುತ್ತವನ್ನು ನೋಡಿ ಕಣ್ಣು ತುಂಬಿಸಿಕೊಳ್ಳುತ್ತಾರೆ.
ಮೂರು ಶತಮಾನಗಳ ಹಿಂದೆ ನೈಸರ್ಗಿಕವಾಗಿ ಸೃಷ್ಟಿಯಾಗಿರುವ ಮಳೆಗೂ ಕರಗದೇ ನಿಂತಿರುವ ಉಣ್ಣಕ್ಕಿ ಹುತ್ತ ವೈಜ್ಞಾನಿಕ ಲೋಕಕ್ಕೆ ಸವಾಲಾಗಿದೆ. ವಿಸ್ಮಯ ಮೂಡಿಸುವ ಹುತ್ತ ರಾತ್ರಿ ಮಹಾಮಂಗಳಾರತಿ ವೇಳೆ ಕೊಂಚ ಅಲುಗಾಡಿ ಪವಾಡ ಉಂಟು ಮಾಡಿರುವುದರ ಜೊತೆಗೆ ಪ್ರತಿವರ್ಷ ಹುತ್ತ ದೊಡ್ಡದಾಗುತ್ತಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ಮಣ್ಣಿನಿಂದಲೇ ನಿರ್ಮಾಣವಾದ ಹುತ್ತ 10 ಅಡಿ ಎತ್ತರವಿದ್ದು ಮಣ್ಣಿನಿಂದಲೇ ಆವೃತ್ತವಾಗಿದೆ. ಈ ಭಾಗದಲ್ಲಿ ದನಕರುಗಳಿಗೆ ಮನುಷ್ಯ ರಿಗೆ ಕಾಯಿಲೆ ಬಂದರೆ ಈ ಹುತ್ತದ ಮಣ್ಣು ಕೈಗೆ ಹಚ್ಚುವುದರಿಂದ ಕಾಯಿಲೆ ದೂರವಾಗುತ್ತದೆ ಎಂಬ ನಂಬಿಕೆಯೂ ಭಕ್ತರಲ್ಲಿ ಅಚಲವಾಗಿ ಉಳಿದಿದೆ.
ಬಗ್ಗಸಗೋಡು- ಬಾನಳ್ಳಿಯ ಅಂಚಿನಲ್ಲಿ ನಡೆಯುವ ಈ ವಿಸ್ಮಯದ ಉತ್ಸವಕ್ಕೆ ಬರೀ ಸ್ಥಳೀಯರೇ ಅಲ್ಲದೇ ದೂರದ ಊರುಗಳಿಂದಲೂ ಪ್ರತಿ ವರ್ಷ ಜಾತ್ರೆಗೆ ಸಹಸ್ರಾರು ಜನ ಸೇರಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಈ ವಿಶೇಷ ಪೂಜೆಗೆ ಹಾಲು ಮತ್ತು ಅಕ್ಕಿಯನ್ನು ಸಮರ್ಪಿಸಿ ಭಕ್ತರು ಭಕ್ತಿ ಮೆರೆಯುತ್ತಾರೆ ಎಂದು ಗ್ರಾಮಸ್ಥರಾದ ವಿನಯ್ ಹೇಳುತ್ತಾರೆ.
ದೀಪಾವಳಿ ಕಳೆದ ನಂತರ ಬರುವ ಹುಣ್ಣಿಮೆ ದಿನ ಅಂದರೆ ಉಣ್ಣಕ್ಕಿ ಜಾತ್ರಾಮಹೋತ್ಸವ ವಿಜೃಂಭಣೆಯಿಂದ ಜರುಗುತ್ತದೆ.ಬೆಳಗ್ಗೆ ವಿಶೇಷ ಪೂಜೆಗಳ ತಯಾರಿ ನಡೆಯುತ್ತದೆ.ಸಂಜೆ ಆರು ಗಂಟೆಯ ನಂತರ ವಿಶೇಷ ಹೂಗಳಿಂದ ಹಾಗೂ ವಿದ್ಯುತ್ ಅಲಂಕಾರದ ಮಂಟಪದ ಒಳಗಡೆ ಈ ಹುತ್ತ ಭಕ್ತರನ್ನು ಅಕರ್ಷಿಸುತ್ತದೆ.
ಜಾತ್ರೆಗೆ ಬಂದ ಭಕ್ತರಿಗೆ ಹಾಲಕ್ಕಿಯನ್ನು ವಿತರಣೆ ಮಾಡಲಾಗುತ್ತದೆ. ಅದನ್ನು ಗ್ರಾಮಸ್ಥರು ಮನೆಗಳಿಗೆ ಹೋಗಿ ಹೊಲ, ಮನೆಯ ಆವರಣದಲ್ಲಿ ಹಾಕುವುದರಿಂದ ಸ್ಥಳ ಶುದ್ಧೀಕರಣ ಆಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ರಾತ್ರಿ ಮಹಾಮಂಗಳಾರತಿಯ ಸಮಯದಲ್ಲಿ ಅರ್ಚಕರು ಪೂಜೆ ನೆರವೇರಿಸುವಾಗ ಹುತ್ತ ಕ್ಷಣಾರ್ಧದಲ್ಲಿ ಅಲುಗಾಡುವುದನ್ನು ಕಂಡು ಭಕ್ತರು ಪಾವನರಾಗುತ್ತಾರೆ. ಅದರ ನಂತರ ಹುತ್ತದ ಸುತ್ತ ಕರುವೊಂದನ್ನು ಪ್ರದಕ್ಷಿಣೆ ಹಾಕಿಸಲಾಗುತ್ತದೆ. ಆಗ ಭಕ್ತರು ಮಂಡಕ್ಕಿ ಎರಚಿ ಹರಕೆ ತೀರಿಸುವ ಪದ್ದತಿಯೂ ರೂಢಿಯಲ್ಲಿದೆ. ಈ ಹುತ್ತದ ಪೂಜೆಯಿಂದ ನರಹುಣ್ಣು,ಕುರ, ಸರ್ಪಸುತ್ತು,ಮುಂತಾದ ಕಾಯಿಲೆಗಳು ಗುಣವಾಗುತ್ತವೆ ಎನ್ನುತ್ತಾರೆ ಗ್ರಾಮಸ್ಥರಾದ ಬಿ.ಎಸ್.ಪ್ರತಾಪ್.