ಸಮಗ್ರ ನ್ಯೂಸ್: ನ.27ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ಜನತಾ ದರ್ಶನ ಕಾರ್ಯಕ್ರಮಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಬರೋಬ್ಬರಿ 3,812 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳ ವಿಲೇವಾರಿಗೆ ಸಿಎಂ ಸಿದ್ಧರಾಮಯ್ಯ 15 ದಿನಗಳ ಡೆಡ್ ಲೈನ್ ಅನ್ನು ಅಧಿಕಾರಿಗಳಿಗೆ ನೀಡಿದ್ದಾರೆ.
ಈ ಬಗ್ಗೆ ಸಿಎಂ ಕಚೇರಿಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ನಡೆಸಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟಾರೆ 3812 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದೆ.
ಇದರಲ್ಲಿ 2862 ಅರ್ಜಿಗಳನ್ನು ಈಗಾಗಲೇ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನೋಂದಣಿ ಮಾಡಲಾಗಿದ್ದು, 950 ಅರ್ಜಿಗಳನ್ನು ನೇರವಾಗಿ ಸ್ವೀಕರಿಸಲಾಗಿದೆ. ಇವುಗಳನ್ನೂ ಸಹ ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನೋಂದಾಯಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.
ಒಟ್ಟಾರೆ ಜನರ ಬಳಿಗೇ ಆಡಳಿತವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಜನರಿಂದಲೇ ನೇರವಾಗಿ ಅಹವಾಲು ಸ್ವೀಕರಿಸಿ ಸ್ಪಂದಿಸುವ ‘ಜನಸ್ಪಂದನ’ ಕಾರ್ಯಕ್ರಮವನ್ನು ನಡೆಸಿದರು. ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಜನರಿಂದ ಅಹವಾಲುಗಳನ್ನು ಸ್ವೀಕರಿಸಿ, ಪರಿಹರಿಸುವ ನಿಟ್ಟಿನಲ್ಲಿ ಸ್ಪಂದಿಸಿದರು.
ರಾಣೆಬೆನ್ನೂರಿನ ಜೀವ ಬೆಳಕು ಅಂಧ ಮಕ್ಕಳ ಶಾಲೆಗೆ ಸಿ.ಎ. ನಿವೇಶನ ಮಂಜೂರಾಗಿದ್ದು, ಇದಕ್ಕಾಗಿ 9 ಲಕ್ಷ ರೂ. ಪಾವತಿಸುವಂತೆ ಸೂಚಿಸಲಾಗಿತ್ತು. ಆದರೆ, ಇದನ್ನು ಪಾವತಿಸುವಷ್ಟು ಆರ್ಥಿಕ ಚೈತನ್ಯ ರಾಣೆಬೆನ್ನೂರಿನ ಜೀವ ಬೆಳಕು ಅಂಧ ಮಕ್ಕಳ ಶಾಲೆಗಿರಲಿಲ್ಲ. ಹಾಗಂತ, ಶಾಲೆಗೆ ಅತಿ ಅಗತ್ಯವಾಗಿದ್ದ ಸಿ.ಎ. ನಿವೇಶನವನ್ನು ಕೈಬಿಡುವಂತೆಯೂ ಇರಲಿಲ್ಲ. ಇದಕ್ಕೇನು ಪರಿಹಾರ? ಎಂದು ಯೋಚಿಸಿದ ಶಾಲಾ ಆಡಳಿತ ಮಂಡಳಿ ಇಂದು ಜನತಾ ದರ್ಶನಕ್ಕೆ ಬಂದು ತಮ್ಮ ಅಹವಾಲು ಸಲ್ಲಿಸಿತು. ಜನಪರ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಕೂಡಲೇ ಆನ್ ಲೈನ್ ಮೂಲಕ ಹಾವೇರಿ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸುವ ಮೂಲಕ ಅಂಧಮಕ್ಕಳ ಬದುಕಿಗೆ ನೆಮ್ಮದಿಯ ಸೂರು ಕಲ್ಪಿಸಿದರು. ಇಂತಹ ಪ್ರಕರಣ ಸೇರಿದಂತೆ ಅನೇಕ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿ ಸಿಎಂ ಸಿದ್ಧರಾಮಯ್ಯ ಸ್ಪಂದಿಸಿದರು.