ಸಮಗ್ರ ನ್ಯೂಸ್: ಹುರಿದ ಅಡಿಕೆ ರೂಪದಲ್ಲಿ ಕಸ್ಟಮ್ಸ್ ಸುಂಕ ತಪ್ಪಿಸಿಕೊಂಡು ಅವ್ಯಾಹತವಾಗಿ ವಿದೇಶ ಅಡಿಕೆ ಭಾರತಕ್ಕೆ ಬರುತ್ತಿರುವುದು ರಾಜ್ಯದ ಅಡಿಕೆ ವಹಿವಾಟು ಸಂಸ್ಥೆಗಳು ಹಾಗೂ ಬೆಳೆಗಾರರ ನಿದ್ದೆಗೆಡಿಸಿದೆ.
‘ತಿಂಗಳ ಈಚೆಗೆ ಸುಮಾರು 20 ಕಂಟೇನರ್ ಅಡಿಕೆ ವಿದೇಶದಿಂದ ಭಾರತಕ್ಕೆ ಬಂದಿದ್ದು, ಪ್ರತಿ ಕಂಟೇನರ್‌ನಲ್ಲಿ 20ರಿಂದ 24 ಟನ್ ಅಡಿಕೆ ಇರಬಹುದೆಂದು ಅಂದಾಜಿಸಲಾಗಿದೆ.
ಇವುಗಳಲ್ಲಿ ಬಹುಪಾಲು ಹುರಿದ ಅಡಿಕೆ ಎಂಬ ಅಧಿಕೃತ ಮಾಹಿತಿ ಲಭ್ಯವಾಗಿದೆ. ಕಸ್ಟಮ್ಸ್ ಇಲಾಖೆಯವರು ಹೇಳುವಂತೆ ಹುರಿದ ಅಡಿಕೆಗೆ ಕನಿಷ್ಠ ಆಮದು ಸುಂಕ ಅನ್ವಯವಾಗುವುದಿಲ್ಲ. ಹೀಗಾಗಿ, ಆಮದುದಾರರು ಇದರ ಲಾಭ ಪಡೆದುಕೊಳ್ಳುತ್ತಿರುವ ಸಾಧ್ಯತೆ ಇದೆ’ ಎಂದು ಮಾರುಕಟ್ಟೆ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಸ್ಥಳೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ವಿದೇಶ ಅಡಿಕೆ ತಲ್ಲಣ ಸೃಷ್ಟಿಸಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ, ಶಿವಮೊಗ್ಗ ಭಾಗಗಳಲ್ಲಿ ಕೆಂಪಡಿಕೆ ಹೆಚ್ಚು ತಯಾರಾಗುತ್ತದೆ. ಕೆಂಪಡಿಕೆಯೊಂದಿಗೆ ಕಳಪೆ ಗುಣಮಟ್ಟದ ಹುರಿ ಅಡಿಕೆ ಮಿಶ್ರಣ ಮಾಡಿ ಕಾಳದಂಧೆಕೋರರು ಮಾರಾಟಕ್ಕಿಳಿದರೆ, ನಮ್ಮ ಅಡಿಕೆ ದರವೂ ಕುಸಿಯುವ ಅಪಾಯ ಇದೆ. ಕ್ವಿಂಟಲ್‌ವೊಂದಕ್ಕೆ ಗರಿಷ್ಠ ₹52ಸಾವಿರದವರೆಗೆ ಇದ್ದ ಕೆಂಪಡಿಕೆ ದರ ಈಗ ₹45ಸಾವಿರಕ್ಕೆ ಕುಸಿದಿದೆ. ಹೀಗಾಗಿ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ.