ಸಮಗ್ರ ನ್ಯೂಸ್: ಸಂವಿಧಾನ ಭಾರತೀಯರ ಆಶೋತ್ತರಗಳಿಗೆ ಸೂಕ್ತವಾಗಿ ಸ್ಪಂದಿಸುತ್ತದೆ -ಹೈಕೋಟ್೯ ನ್ಯಾಯಮೂರ್ತಿ ಮತ್ತು ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಉಮಾ ಅಭಿಪ್ರಾಯಸಿದ್ದಾರೆ.
ಜನತೆಯ ಆಶೋತ್ತರಗಳಿಗೆ ಭಾರತೀಯ ಸಂವಿಧಾನ ಅರ್ಥಪೂರ್ಣವಾಗಿ ಸ್ಪಂದಿಸುತ್ತದೆ ಎಂದು ಹೇಳಿದರು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಆಯೋಜಿತವಾದ ಜಿಲ್ಲಾ ಮಟ್ಟದ ವಕೀಲರ ಕ್ರೀಡಾಕೂಟ ಸಂದಭ೯ ಸಂವಿಧಾನ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿ ಭೋದಿಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಈ ಸಂದರ್ಭದಲ್ಲಿ ಮಾತನಾಡಿ, ಭಾರತದ ಸಂವಿಧಾನ ಸದಾ ನಮ್ಮೊಂದಿಗೆ ಪ್ರತೀ ಹಂತದಲ್ಲಿಯೂ ಇರುವ ಜೀವಂತಿಕೆಯ ಸಂವಿಧಾನವಾಗಿದೆ. ಭಾರತದ ಪ್ರತಿಯೋರ್ವ ನಾಗರಿಕನ ಆಶೋತ್ತರಗಳಿಗೂ ಸ್ಪಂದಿಸುವ ಶಕ್ತಿ ಭಾರತೀಯ ಸಂವಿಧಾನಕ್ಕೆ ಇದೆ ಎಂದು ಹೇಳಿದರು.
ಕೊಡಗಿನ ಕ್ರೀಡಾಪಟುಗಳು ಸಾಧನೆ ಮೂಲಕ ಖ್ಯಾತಿ ಪಡೆದು ಈ ಜಿಲ್ಲೆಯ ಕ್ರೀಡಾಹಿರಿಮೆಯನ್ನು ಸಾರಿದ್ದು, ಇದೀಗ ವಕೀಲರು ಕೂಡ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾಪ್ರತಿಭೆಯನ್ನು ಬೆಳಕಿಗೆ ತರುತ್ತಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದೂ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರು 1949ರ ನ. 26ರಂದು ಅಂಗೀಕರಿಸಲ್ಪಟ್ಟು, 1950 ನೇ ಜನವರಿ 26 ರಂದು ಜಾರಿಗೆ ಬಂದ ಭಾರತದ ಸಂವಿಧಾನವು ಜಗತ್ತಿನಲ್ಲಿಯೇ ಶ್ರೇಷ್ಟವಾದ ಸಂವಿಧಾನ ಎನಿಸಿದೆ. ಈ ಸಂವಿಧಾನ ರೂಪಿಸಿದ ಕೀರ್ತಿ ಖಂಡಿತವಾಗಿಯೂ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲಬೇಕು. ಕಾಲದಿಂದ ಕಾಲಕ್ಕೆ ಅಗತ್ಯವಾದ ಬದಲಾವಣೆಗಳು ಸಂವಿಧಾನದಲ್ಲಿ ಆಗುತ್ತಿದ್ದು ಈವರೆಗೂ 128 ಸಲ ತಿದ್ದುಪಡಿ ಮಾಡಲಾಗಿದೆ. ಈ ವರ್ಷ ಸಂಸತ್ ನಲ್ಲಿ ಶೇ.33 ರಷ್ಟು ಮಹಿಳಾ ಸದಸ್ಯೆಯರಿಗೆ ಅವಕಾಶ ಕಲ್ಪಿಸುವ ಮಸೂದೆಯನ್ನೂ ಜಾರಿಗೊಳಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಭಾರತದಲ್ಲಿ ಎಲ್ಲರೂ ಸಮಾನರು ಎಂದು ಈ ಮೂಲಕ ಸಾರಲಾಗಿದೆ ಎಂದು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಸಿ. ಶ್ಯಾಮ್ ಪ್ರಸಾದ್ ಮಾತನಾಡಿ, ಜೀವನದಲ್ಲಿ ಸೋಲು ಗೆಲವುಗಳನ್ನು ಸಮಾನಾಗಿ ಸ್ವೀಕರಿಸಬೇಕು ಎಂಬ ಸಂದೇಶ ಕ್ರೀಡಾಸ್ಪಧೆ೯ಗಳಲ್ಲಿ ಅಡಕವಾಗಿದೆ. ಮಾನಸಿಕ ನೆಮ್ಮದಿ ಮತ್ತು ದೈಹಿಕ ನೆಮ್ಮದಿಗೆ ಕ್ರೀಡೆಗಳು ಸಹಕಾರಿಯಾಗಿದೆ ಎಂದು ಹೇಳಿದರು.
ರಾಜ್ಯದ ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ಮಾತನಾಡಿ, ಮನಸ್ಸಿನ ಕ್ಲೇಶೆಗಳಿಗೆ ನೆಮ್ಮದಿ ನೀಡುವಂಥ ಶಕ್ತಿ ಕ್ರೀಡೆಗಳಲ್ಲಿದೆ. ಹೀಗಾಗಿಯೇ ಕ್ರೀಡೆ ಮಾನಸಿಕ ಚೈತನ್ಯಕ್ಕೂ ಸಹಕಾರಿ ಎನಿಸಿದೆ ಎಂದರಲ್ಲದೇ, ವಕೀಲ ವೖಂದದವರು ಸಮಾಜದ ಒಗ್ಗಟ್ಟಿಗೆ ಸದಾ ಕಾಯೋನ್ಮುಖರಾಗಿರಬೇಕು ಎಂದು ಸಲಹೆ ನೀಡಿದರು.
ಮಡಿಕೇರಿಯ ಮ್ಯಾನ್ಸ್ ಕೌಂಪೌಂಡ್ ಕ್ರೀಡಾಂಗಣ ದೇಶಕ್ಕೆ ಅನೇಕ ಪ್ರತಿಭಾವಂತ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿದ ಹಿರಿಮೆಗೆ ಪಾತ್ರವಾಗಿದೆ ಎಂದೂ ನಾಣಯ್ಯ ಸ್ಮರಿಸಿಕೊಂಡರು.
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ನ್ಯಾಯಮಂಡನೆಯಲ್ಲಿ ಸದಾ ಕ್ರಿಯಾಶೀಲರಾಗಿ ಮತ್ತು ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವ ವಕೀಲ ವೖಂದದವರಿಗೆ ಕ್ರೀಡಾಕೂಟದ ಮೂಲಕ ಒತ್ತಡ ನಿವಾರಣೆಯೊಂದಿಗೆ ಕೌಟುಂಬಿಕ ಸಂಭ್ರಮಕ್ಕೆ ಈ ಕ್ರೀಡಾಸ್ಪಧೆ೯ಗಳು ನೆರವಾಗಲಿದೆ. ಇದೇ ಮೊದಲ ಬಾರಿಗೆ ಮಡಿಕೇರಿ ವಕೀಲರ ಸಂಘದಿಂದ ಜಿಲ್ಲೆಯ ಎಲ್ಲಾ ವಕೀಲರಿಗಾಗಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದ್ದೇವೆ ಎಂದರು.
ರಾಷ್ಟ್ರೀಯ ಕ್ರೀಡಾಪಟುಗಳಾದ ಕೆಚ್ಚೆಟೀರ ರೇಷ್ಮಾ ಮತ್ತು ಎ.ಜಿ. ಪರ್ಲಿನ್ ಪೆಮ್ಮಯ್ಯ ಕ್ರೀಡಾಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದರು. ವೇದಿಕೆಯಲ್ಲಿ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಪ್ರಶಾಂತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ. ಪ್ರಸಾದ್, ಸಿವಿಲ್ ನ್ಯಾಯಾಧೀಶ ಎನ್.ಬಿ. ಜಯಲಕ್ಷಿ, ಪ್ರಿನ್ಸಿಪಾಲ್ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಮುನಿರತ್ಮಮ್ಮ, ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶ ನಾಗೇಶ್, ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಕೆ.ಜಿ. ಅಪ್ಪಣ್ಣ, ಕುಶಾಲನಗರದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು, ಸೋಮವಾರಪೇಟೆ ಅಧ್ಯಕ್ಷ ವಿಠಲ ಕಾಟ್ನಮನೆ, ಪೊನ್ನಂಪೇಟೆ ಅಧ್ಯಕ್ಷ ಮುತ್ತಪ್ಪ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಂ. ಕೇಶವ, ಉಪಾಧ್ಯಕ್ಷ ಎಂ.ಪಿ. ನಾರಗಾಜ್. ಖಜಾಂಜಿ ಜಿ.ಆರ್.ರವಿಶಂಕರ್, ಜಂಟಿಕಾರ್ಯದರ್ಶಿ ಪವನ್ ಪೆಮ್ಮಯ್ಯ, ಕ್ರೀಡಾಸಮಿತಿ ಸಂಚಾಲಕ ದುಗ್ಗಳ ಕಪಿಲ್ ಕುಮಾರ್ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ವಕೀಲರು ವೈವಿಧ್ಯಮಯ ಕ್ರೀಡಾಸ್ಪಧೆ೯ಗಳಲ್ಲಿ ಪಾಲ್ಗೊಂಡಿದ್ದರು.