ಸಮಗ್ರ ನ್ಯೂಸ್: ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ, ಭಾರತದ ಆರ್ಥಿಕ ರಾಜಧಾನಿ ಎಂದೇ ಖ್ಯಾತಿ ಪಡೆದಿರುವ ಮುಂಬೈ ಮೇಲೆ ನಡೆದ ವಿನಾಶಕಾರಿ ಭಯೋತ್ಪಾದಕ ದಾಳಿಗೆ ಹದಿನೈದು ವರ್ಷ ತುಂಬಿದೆ. ಲಷ್ಕರ್-ಎ-ತೋಯ್ಬಾ ಸಂಘಟನೆಯ 10 ಮಂದಿ ಭಯೋತ್ಪಾದಕರ ಈ ಸಂಘಟಿತ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು ಮತ್ತು 300ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದರು ಈ ಭಯೋತ್ಪಾದಕ ದಾಳಿ ಸಂಭವಿಸಿ 15 ವರ್ಷಗಳು ಕಳೆದರೂ ಸಹ ಘಟನೆಯ ಕರಾಳತೆ ಮತ್ತು ಮೃತಪಟ್ಟವರ ನೆನಪು ಇನ್ನು ಜೀವಂತವಾಗಿದೆ.
ಭಾರತೀಯರು, ಯರೋಪಿಯನ್ನರು ಹಾಗೂ ಯಹೂದಿಗಳು ಹೆಚ್ಚಾಗಿ ಭೇಟಿ ನೀಡುವ ತಾಜ್, ಒಬೆರಾಯ್, ಛತ್ರಪತಿ ಶಿವಾಜಿ ರೈಲು ನಿಲ್ದಾಣ, ನಾರಿಮನ್ ಹೌಸ್‍ನಲ್ಲಿ ಗರಿಷ್ಠ ಜನಸಂದಣಿ ಇರುವ ಕುರಿತು ಸಮೀಕ್ಷೆ ನಡೆಸಿದ ನಂತರ ಉಗ್ರರು ಯೋಜನೆ ರೂಪಿಸಿ ದಾಳಿ ನಡೆಸಿದ್ದರು. ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ 10 ಉಗ್ರರ ಪೈಕಿ 9 ಮಂದಿಯನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದವು. ಬದುಕುಳಿದಿದ್ದ ಓರ್ವ ಉಗ್ರ ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್‍ಗೆ 2010ರಲ್ಲಿ ಮರಣದಂಡನೆ ವಿಧಿಸಿ, 2012ರಲ್ಲಿ ಗಲ್ಲಿಗೇರಿಸಲಾಗಿತ್ತು.
ಈ ದುರಂತ ಭಯೋತ್ಪಾದನಾ ದಾಳಿಯ 15ನೇ ವಾರ್ಷಿಕೋತ್ಸವವನ್ನು ಗುರುತಿಸುವ ಮೂಲಕ ಇಸ್ರೇಲ್ ಸರ್ಕಾರವು ಲಷ್ಕರ್-ಎ-ತೋಯ್ಬಾ ಸಂಘಟನೆಯನ್ನು ಭಯೋತ್ಪಾದಕಾ ಸಂಘಟನೆ ಎಂದು ಘೋಷಿಸಿದೆ.