ಸಮಗ್ರ ನ್ಯೂಸ್: ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹಿಂಗಾರು ಮಳೆ ಅಬ್ಬರಿಸಲು ಶುರುವಿಟ್ಟುಕೊಂಡಿದೆ. ಕಳೆದೊಂದು ವಾರದಿಂದ ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಧಾರಾಕಾರವಾಗಿ ಮಳೆ ಆಗಿದೆ. ಈ ಮಳೆ ಮುಂದಿನ ಎರಡು ವಾರಗಳ ಕಾಲ ಮುಂದುವರಿಯಲಿದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ತಿಂಗಳು ಡಿಸೆಂಬರ್ 1ರವರೆಗೆ ವ್ಯಾಪಕವಾಗಿ ಮಳೆ ಆಗಲಿದೆ. ಕೆಲವು ಕಡೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಅಬ್ಬರಿಸಲಿದೆ. ಕರಾವಳಿಯ ಮೂರು ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಿಗೆ ಮಳೆ ಬಿರುಸಾಗಿರಲಿದೆ.
ಮುಂದಿನ ಮೂರು ದಿನಗಳ ಮಳೆ ಮುನ್ಸೂಚನೆ ನೋಡುವುದಾದರೆ ದಕ್ಷಿಣ ಒಳನಾಡಿನ ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗೆ ಶುಕ್ರವಾರ ಒಂದು ಭಾರಿ ಮಳೆ ಸಂಬಂಧ ‘ಯೆಲ್ಲೋ ಅಲರ್ಟ್’ ಘೋಷಣೆ ಮಾಡಿದೆ.
ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಹ ಶುಕ್ರವಾರದಿಂದ ಮೂರು ದಿನ ಮಳೆ ಅಬ್ಬರಿಲಿದೆ. ಮೂರು ದಿನಗಳ ನಂತರವು ಈ ಮಳೆ ತುಸು ದುರ್ಬಲಗೊಂಡರು ಸಹಿತ ಮತ್ತೆ ಡಿಸೆಂಬರ 1ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಒಳನಾಡಿನಲ್ಲಿ ಯಾವುದೇ ಮಳೆ ಮುನ್ಸೂಚನೆಗಳು ಇಲ್ಲ. ಆಗಾಗ ಬಿಸಿಲು ಕಡಿಮೆಯಾಗಿ ಮೋಡ ಕವಿದ ವಾತಾವರಣ ಅಲ್ಲಲ್ಲಿ ಕಂಡು ಬಂದರೂ ಸಹಿತ ತುಂತುರು ಮಳೆ ನಿರೀಕ್ಷೆ ಇದೆ ಹೊರತು ಜೋರು ಮಳೆ ಸಂಭವ ಇಲ್ಲ. ಅಲ್ಲದೇ ಇಲ್ಲಿನ ಹವಾಮಾನದಲ್ಲಿ ಯಾವುದೇ ಗಂಭೀರ ಸ್ವರೂಪದ ಲಕ್ಷಣಗಳು ಇಲ್ಲ ಎಂದು ತಿಳಿಸಲಾಗಿದೆ.