ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೈರಾಪುರ ಸಮೀಪದ ಹೊಸಕೆರೆ ಗ್ರಾಮದಲ್ಲಿ ಸರ್ಕಾರ ರಚಿತ ಆನೆ ನಿಗ್ರಹ ಪಡೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಯುವಕ ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ. ಮೂಡಿಗೆರೆ ತಾಲೂಕಿನ ಗೌಡಹಳ್ಳಿ ನಿವಾಸಿ 26 ವರ್ಷದ ಕಾರ್ತಿಕ್ ಗೌಡ ಮೃತನಾದ ವ್ಯಕ್ತಿ. ಕಳೆದ ಎರಡು ತಿಂಗಳಲ್ಲಿ ಕಾಡಾನೆ ದಾಳಿಗೆ ಇದು ಮೂರನೇ ಸಾವು.
ಒಂದೂವರೆ ತಿಂಗಳ ಹಿಂದೆ ಆಲ್ದೂರು ಸಮೀಪದ ಅರೆನೂರು ಬಳಿ ಆಸ್ಪತ್ರೆಗೆ ಹೋಗುತ್ತಿದ್ದ ಚಿನ್ನಿ ಎಂಬ ವ್ಯಕ್ತಿ ಹಾಗೂ ಕಳೆದ 20 ದಿನಗಳ ಹಿಂದಷ್ಟೆ ಆಲ್ದೂರು ಸಮೀಪದ ಕೂಲಿ ಕಾರ್ಮಿಕ ಮಹಿಳೆ ವೀಣಾ ಎಂಬುವರು ಆನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದರು.
ಕಳೆದ ಎರಡು ವರ್ಷದಲ್ಲಿ ಮೂಡಿಗೆರೆ ತಾಲೂಕಿನಲ್ಲಿ ಹತ್ತಕ್ಕೂ ಹೆಚ್ಚು ಜನ ಆನೆ ದಾಳಿಗೆ ಉಸಿರು ಚೆಲ್ಲಿದ್ದು. ಇಂದು ಕೂಡ ಆನೆ ದಾಳಿಗೆ 26 ವರ್ಷದ ಯುವಕ ಸಾವನ್ನಪ್ಪಿರೋದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ದಶಕದಿಂದಲೂ ಕೂಡ ಆನೆ ಹಾವಳಿ ಯಥೇಚ್ಛವಾಗಿದ್ದು. ಅದರಲ್ಲೂ ಕಳೆದ ನಾಲ್ಕೈದು ವರ್ಷಗಳಿಂದಂತೂ ಮಲೆನಾಡಿಗರು ಆನೆ ಭಯದಲ್ಲೇ ಬದುಕುತ್ತಿದ್ದಾರೆ.
ಆನೆ ದಾಳಿಗೆ ಸಾವು ಸಂಭವಿಸಿದ ಬಳಿಕ ಸ್ಥಳಕ್ಕೆ ಆಗಮಿಸೋ ಅಧಿಕಾರಿಗಳು ಆನೆ ಹಾವಾಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ ಎಂದು ಹೇಳಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದರಿಂದ ಆನೆ ಹಾವಾಳಿಗೆ ಕಡಿವಾಣ ಇಲ್ಲದಂತಾಗಿದೆ. ಆನೆ ಹಾವಾಳಿಗೆ ಶಾಶ್ವತ ಪರಿಹಾರ ನೀಡಬೆಕು. ಇಲ್ಲವಾದರೆ, ಆನೆ ದಾಳಿಯಿಂದ ಮುಂದಿನ ದಿನಗಳಲ್ಲೂ ಪ್ರಾಣ ಕಳೆದುಕೊಳ್ಳುವ ಸಂಖ್ಯೆ ಕಡಿಮೆ ಆಗುವುದಿಲ್ಲ. ಹಾಗಾಗಿ, ನಮಗೆ ನಿಮ್ಮ ಹಣಕಾಸಿನ ಪರಿಹಾರ, ಸ್ಥಳಾಂತರದ ನಾಟಕ ಬೇಡ. ಎಂದು ಮಲೆನಾಡಿಗರು ಆಗ್ರಹಿಸಿದ್ದಾರೆ.