ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕನ್ನಡಿಗ ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ನಂದನವನದಲ್ಲಿರುವ ನಿವಾಸದಲ್ಲಿ ನೀರವ ಮೌನ ಆವರಿಸಿದೆ.
ಮೈಸೂರು ಮೂಲದ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಅವರ ತಂದೆ ವೆಂಕಟೇಶ್ ಅವರು ಮಂಗಳೂರಿನ MRPL ಸಂಸ್ಥೆಯಲ್ಲಿ ಎಂಡಿ ಆಗಿದ್ದರು. ಹೀಗಾಗಿ ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ಕುಟುಂಬ ಸಹಿರ ವೆಂಕಟೇಶ್ ವಾಸವಿದ್ದರು. ಮಂಗಳೂರು, ಬೆಂಗಳೂರಿನಲ್ಲಿ ಶಿಕ್ಷಣ ಪೂರೈಸಿದ ಪ್ರಾಂಜಲ್ ಭಾರತೀಯ ಸೇನೆಗೆ ಸೇರಿದ್ದರು. ಅಲ್ಲದೆ, 63 ರಾಷ್ಟ್ರೀಯ ರೈಫಲ್ಸ್ ಅನ್ನು ಲೀಡ್ ಮಾಡುತ್ತಿದ್ದರು. ಇತ್ತೀಚೆಗೆ ವೆಂಕಟೇಶ್ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರಿಂದ ನಂದನವನದಲ್ಲಿ ನೆಲೆಸಿದ್ದರು.
ಎರಡು ವರ್ಷದ ಹಿಂದೆ ಜಮ್ಮು ಕಾಶ್ಮೀರಕ್ಕೆ ತೆರಳುವ ಮೊದಲು ಕ್ಯಾಪ್ಟನ್ ಪ್ರಾಂಜಲ್ ಅವರು ವಿವಾಹವಾಗಿದ್ದರು. ಬೆಂಗಳೂರಿನ ಅದಿತಿ ಎಂಬುವವರ ಜೊತೆ ವಿವಾಹವಾಗಿದ್ದರು. ಸದ್ಯ ಚೆನ್ನೈನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅದಿತಿ, ಪತಿ ನಿಧನ ಹಿನ್ನೆಲೆ ಜಿಗಣಿ ಸಮೀಪದ ಬುಕ್ಕಸಾಗರ ನಿವಾಸಕ್ಕೆ ಆಗಮಿಸಿದ್ದಾರೆ.
ಮಂಗಳೂರಿನ ಎಮ್.ಆರ್.ಪಿ.ಎಲ್ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡಿದ್ದ ಪ್ರಾಂಜಲ್, ಕಾಲೇಜು ವ್ಯಾಸಾಂಗವನ್ನು ಮಹೇಶ್ ಪಿ.ಯು ಕಾಲೇಜಿನಲ್ಲಿ ಮುಗಿಸಿದರು. ಸಿದ್ದಗಂಗಾದಲ್ಲೂ ವ್ಯಾಸಂಗ ಮಾಡಿದ್ದ ಪ್ರಾಂಜಲ್, ಬಳಿಕ ಆರ್ಮಿ ಕಾಲೇಜು ಮದ್ಯಪ್ರದೇಶದ ಮಹೌನಲ್ಲಿ ಶಿಕ್ಷಣ ಪಡೆದು ಸೇನೆಗೆ ಸೇರ್ಪಡೆಯಾಗಿ ಕಾಶ್ಮೀರದಲ್ಲಿ ಎರಡು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು. ದಸರಾ ಸಂದರ್ಭದಲ್ಲಿ ಮನೆಗೆ ಬಂದು ಹೋಗಿದ್ದರು.
ಬುಧವಾರ ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಉಗ್ರ ನಿಗ್ರಹಕ್ಕಾಗಿ ಸೇನೆ ನಡೆಸಿದ ಎನ್‌ಕೌಂಟರ್‌ನಲ್ಲಿ 63 ರಾಷ್ಟ್ರೀಯ ರೈಫಲ್ಸ್ ನ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಸೇರಿ 4 ಯೋಧರು ಹುತಾತ್ಮರಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಉಗ್ರರಿಗಾಗಿ ಸೇನಾ ಕಾರ್ಯಾಚರಣೆ ಮುಂದುವರೆದಿದೆ.