Ad Widget .

ಬೆಂಗಳೂರು ಕಂಬಳಕ್ಕೆ ಸಕಲ ಸಿದ್ದತೆ| ರಾಜಧಾನಿಯಲ್ಲಿ ರಾರಾಜಿಸಲಿದೆ ಕರಾವಳಿಯ ಜಾನಪದ ಕ್ರೀಡೆ

ಸಮಗ್ರ ನ್ಯೂಸ್: ಕರಾವಳಿಯ ಜಾನಪದ ಮತ್ತು ಸಾಂಸ್ಕೃತಿಕ ಕ್ರೀಡೆಯಾದ ಕಂಬಳದ ವೈಭವವನ್ನು ರಾಜಧಾನಿಯಲ್ಲಿ ಸಾಕಾರಗೊಳಿಸಿ ಇಡೀ ಜಗತ್ತಿಗೆ ಉಣಬಡಿಸುವ ಮಹತ್ವಾಕಾಂಕ್ಷೆ ಹೊತ್ತಿರುವ ಬೆಂಗಳೂರು ಕಂಬಳಕ್ಕೆ ದಿನ ಸನ್ನಿಹಿತವಾಗುತ್ತಿದೆ.

Ad Widget . Ad Widget .

ನವೆಂಬರ್‌ 25 ಮತ್ತು 26ರಂದು ಅದ್ಧೂರಿ ಬೆಂಗಳೂರು ಕಂಬಳ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿವೆ. ಹಿಂದಿನಿಂದಲೂ ಕುತೂಹಲ ಮೂಡಿಸಿದ್ದ, ಕಾಂತಾರ ಸಿನಿಮಾದ ಮೂಲಕ ಇಡೀ ದೇಶದ ಗಮನ ಸೆಳೆದ ಕಂಬಳ ಈಗ ರಾಜಧಾನಿಯಲ್ಲಿ ಹೊಸ ದಾಖಲೆ ಬರೆಯಲು ʻಕರೆ” ಸಜ್ಜಾಗುತ್ತಿದೆ.

Ad Widget . Ad Widget .

ಅರಮನೆ ಮೈದಾನದ ಸುಮಾರು 70 ಎಕರೆ ಪ್ರದೇಶದಲ್ಲಿ ಕಂಬಳಕ್ಕಾಗಿ ಸರ್ವ ವ್ಯವಸ್ಥೆಗಳನ್ನು ಮಾಡಲಾಗಿದೆ. 155 ಮೀಟರ್‌ ಉದ್ದದ ಕಂಬಳ ಕರೆಗಳ ನಿರ್ಮಾಣ ಪೂರ್ಣವಾಗಿದೆ. ಕಂಬಳಕ್ಕೆ 150 ಜೋಡಿ ಕೋಣಗಳು ಆಗಮಿಸಲಿದ್ದು, ಅವುಗಳ ವಿಶ್ರಾಂತಿ ಮತ್ತು ಆಹಾರಕ್ಕೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಜರುಗುವ ಕಂಬಳವನ್ನು ಸುಮಾರು 8 ಮಂದಿ ವೀಕ್ಷಿಸುವ ನಿರೀಕ್ಷೆ ಇದೆ.

ಈ ಕಂಬಳದ ವೀಕ್ಷಣೆಗೆ ಜನಪ್ರತಿನಿಧಿಗಳು, ರಾಜಕಾರಣಿಗಳು, ಚಿತ್ರ ನಟ-ನಟಿಯರು, ಅಧಿಕಾರಿಗಳು, ಅತಿ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ. ಕಂಬಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ತುಳುನಾಡಿನ ಬದುಕಿನ ವಸ್ತು ಪ್ರದರ್ಶನ, ತುಳುನಾಡೂ ಸೇರಿದಂತೆ ಇಡೀ ರಾಜ್ಯದ ವೈವಿಧ್ಯಗಳನ್ನು ಒಳಗೊಂಡ ಆಹಾರ ಮೇಳವೂ ಇರಲಿದೆ. ಶನಿವಾರ ಬೆಳಗ್ಗೆ 10.30ರಿಂದ ಆರಂಭಗೊಳ್ಳುವ ಕಂಬಳ ರಾತ್ರಿ ಇಡೀ ಹೊನಲು ಬೆಳಕಿನಲ್ಲಿ ನಡೆದು ಮರುದಿನ ಮಧ್ಯಾಹ್ನದ ಹೊತ್ತಿಗೆ ಮುಕ್ತಾಯವಾಗುವ ನಿರೀಕ್ಷೆ ಇದೆ.

ಕಂಬಳಕ್ಕೆ ಬರುವವರಲ್ಲಿ ಎಂಟು ಸಾವಿರ ಮಂದಿಗೆ ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಮಾಡಲಾಗಿದೆ. 2000 ವಿಐಪಿಗಳು ಆಗಮಿಸಲಿದ್ದು ಅವರಿಗಾಗಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಈ ಕಂಬಳಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳದಲ್ಲಿ 150 ಜೋಡಿ ಕೋಣಗಳು ಭಾಗವಹಿಸಲಿವೆ. ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳನ್ನು ನ. 23ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ಜತೆಯಾಗಿ ಹೊರಡಲಿವೆ. ಅಲ್ಲಿ 150 ಲಾರಿಗಳಲ್ಲಿ ಕೋಣಗಳು ಜತೆಯಾಗಿ ಮೆರವಣಿಗೆ ಮೂಲಕ ಹೊರಡಲಿವೆ. ದಕ್ಷಿಣ ಕನ್ನಡ ಜಿಲ್ಲಾಡಳಿತವೇ ಈ ಮೆರವಣಿಗೆಗೆ ಹಸಿರು ನಿಶಾನೆ ತೋರಿಸುವ ಸಾಧ್ಯತೆ ಇದೆ.

ನವೆಂಬರ್ 23ರಂದು ಬೆಳಗ್ಗೆ 10 ಗಂಟೆಗೆ ಉಪ್ಪಿನಂಗಡಿಯಿಂದ ಕೋಣಗಳು ಲಾರಿಯಲ್ಲಿ ಹೊರಡಲಿದ್ದು ಹಾಸನದಲ್ಲಿ ಅವುಗಳಿಗೆ ಭವ್ಯ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಎರಡು ಗಂಟೆಗಳ ಕಾಲ ವಿಶ್ರಾಂತಿಯ ಬಳಿಕ ಅಲ್ಲಿಂದ ಬೆಂಗಳೂರಿನ ಕಡೆ ಪ್ರಯಾಣ ಮುಂದುವರಿಯಲಿದೆ. ನೆಲಮಂಗಲದಲ್ಲಿ ರಾತ್ರಿ ಕೆಲಹೊತ್ತು ವಿಶ್ರಾಂತಿ ಪಡೆದು ಆಹಾರ ಸೇವನೆಯ ಬಳಿಕ ಪ್ರಯಾಣ ಮುಂದುವರಿಯಲಿದೆ. ನಡುರಾತ್ರಿಯ ವೇಳೆ ಅರಮನೆ ಮೈದಾನದಲ್ಲಿ ಏಕಕಾಲದಲ್ಲಿ 300 ಜೋಡಿ ಕೋಣಗಳು ಮತ್ತು ಅವುಗಳ ಜತೆಗಿರುವ ಸುಮಾರು 5000 ಜನರು ಇಳಿಯಲಿದ್ದಾರೆ.

ಈಗಾಗಲೇ ಕಂಬಳದಲ್ಲಿ ವೈಭವವನ್ನು ಮೆರೆದಿರುವ ಪ್ರಶಸ್ತಿಗಳನ್ನು ಪಡೆದಿರುವ ನೂರು ಜೋಡಿ ಕೋಣಗಳು ಇಲ್ಲಿರಲಿವೆ. ಜತೆಗೆ ಇದೇ ಕೂಟದಲ್ಲಿ ಮೊದಲ ಬಾರಿ ಕರೆಗಿಳಿಯುವ 15 ಜೋಡಿಗಳು ಕೋಣಗಳೂ ಕೂಡಾ ಸಿದ್ಧವಾಗಿವೆ.

ಹಗ್ಗ (ಕಿರಿಯ ಮತ್ತು ಹಿರಿಯ ವಿಭಾಗ), ನೇಗಿಲು (ಕಿರಿಯ ಮತ್ತು ಹಿರಿಯ ವಿಭಾಗ), ಅಡ್ಡಹಲಗೆ ಮತ್ತು ಆಕಾಶದೆತ್ತರಕ್ಕೆ ನೀರು ಚಿಮ್ಮಿಸುವ ಕನಹಲಗೆ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಗೆದ್ದ ಕೋಣಗಳ ಮಾಲೀಕರಿಗೆ ಪ್ರಥಮ ಬಹುಮಾನವಾಗಿ 16 ಗ್ರಾಂ ಚಿನ್ನದ ಪದಕ ಮತ್ತು 1 ಲಕ್ಷ ರೂ. ನಗದು ಬಹುಮಾನವಿದ್ದರೆ, ದ್ವಿತೀಯ ಸ್ಥಾನ ಪಡೆದವರಿಗೆ 8 ಗ್ರಾಂ ಚಿನ್ನದ ಪದಕ ಮತ್ತು 50 ಸಾವಿರ ನಗದು ಸಿಗಲಿದೆ. ತೃತೀಯ ಸ್ಥಾನಿಗಳಿಗೆ 4 ಗ್ರಾಂ ಚಿನ್ನದ ಪದಕ ಮತ್ತು 25 ಸಾವಿರ ನಗದು ದೊರೆಯಲಿದೆ. ಎಲ್ಲ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಬಹುಮಾನವಿರುತ್ತದೆ.

ಕಂಬಳದಲ್ಲಿ ಕೋಣಗಳ ಓಟದ ವೈಭವವನ್ನು ಕಣ್ತುಂಬಿಕೊಳ್ಳಲು ಬರುವವರಿಗೆ ಕೋಣಗಳ ಓಟದ ಅಬ್ಬರವನ್ನು ವೀಕ್ಷಿಸುವುದರ ಜೊತೆಗೆ ಬಗೆಬಗೆಯ ಖಾದ್ಯಗಳನ್ನು ಸವಿಯಬಹುದಾಗಿದೆ. ಕರಾವಳಿ ಭಾಗದಲ್ಲಿ ಪ್ರಸಿದ್ಧವಾಗಿರುವ ಕೋರಿ ರೊಟ್ಟಿ, ಪುಂಡಿ, ಗಸಿ, ಪತ್ರೊಡೆ, ಅಕ್ಕಿ ಸೇಮಿಗೆ ಸೇರಿದಂತೆ ನಾನಾ ಖಾದ್ಯಗಳು ಮೇಳೈಸಲಿವೆ. ರಾಜ್ಯದ ಎಲ್ಲ ಭಾಗಗಳ ತಿಂಡಿ ತಿನಿಸುಗಳು ಕೂಡಾ ಮೇಳದಲ್ಲಿ ಇರಲಿವೆ. ಸುಮಾರು ಐದು ಎಕರೆ ಪ್ರದೇಶದಲ್ಲಿ ಆಹಾರ ಮೇಳ ನಡೆಯಲಿದೆ.

ಬೆಂಗಳೂರಿನ ಕಂಬಳಕ್ಕೆ ಸ್ಯಾಂಡಲ್‌ವುಡ್‌ ಮಾತ್ರವಲ್ಲ ಬಾಲಿವುಡ್ ಸೇರಿದಂತೆ ಪ್ಯಾನ್‌ ಇಂಡಿಯಾ ಸ್ಟಾರ್‌ಗಳು ಬರಲಿದ್ದಾರೆ. ಐಶ್ವರ್ಯ ರೈ, ಅನುಷ್ಕಾ ಶೆಟ್ಟಿ ಕಂಬಳ ನೋಡಲು ಬರುತ್ತಾರೆ ಎಂದು ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *