ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ 2024ರ ಜನವರಿ 22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸಕಲ ಸಿದ್ದತೆಗಳನ್ನು ಮಾಡಲಾಗುತ್ತಿದೆ, ಈ ಹಿನ್ನಲೆಯಲ್ಲಿ ರಾಮಮಂದಿರಕ್ಕೆ ಅರ್ಚಕರ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಇಲ್ಲಿಯವರೆಗೆ ಮೂರು ಸಾವಿರ ಅರ್ಜಿಗಳ ಸಲ್ಲಿಕೆಯಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅರ್ಚಕ ಹುದ್ದೆಯ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಸಲ್ಲಿಕೆಯಾದ ಮೂರು ಸಾವಿರ ಅರ್ಜಿಗಳ ಪೈಕಿ, ಆರ್ಹತೆಯ ಆಧಾರದ ಮೇಲೆ 200 ಮಂದಿಯನ್ನು ಸಂದರ್ಶನಕ್ಕೆ ಶಾರ್ಟ್‍ಲಿಸ್ಟ್ ಮಾಡಲಾಗಿದೆ. ಅಂತಿಮವಾಗಿ 20 ಮಂದಿಯನ್ನು ಆಯ್ಕೆ ಮಾಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳನ್ನು ಆರು ತಿಂಗಳ ತರಬೇತಿಯ ನಂತರ ರಾಮಜನ್ಮಭೂಮಿ ಸಂಕೀರ್ಣದ ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗುತ್ತಿದೆ. ನಂತರ ರಾಮಮಂದಿರದ ಅರ್ಚಕರ ಹುದ್ದೆಗಳಲ್ಲಿ ಅವರನ್ನು ನೇಮಕ ಮಾಡಲಾಗುವುದು. ಅರ್ಚಕರ ಹುದ್ದೆಯ ಅಭ್ಯರ್ಥಿಗಳಿಗೆ ಧಾರ್ಮಿಕ ಪಠ್ಯಕ್ರಮದ ಕುರಿತು ತರಬೇತಿ ನೀಡಲಾಗುತ್ತದೆ. ತರಬೇತಿಯ ಅವಧಿಯಲ್ಲಿ ಮಾಸಿಕ 2000 ಭತ್ಯೆ ಹಾಗೂ ಊಟ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಟ್ರಸ್ಟ್ ಹೇಳಿದೆ.
ಅರ್ಚಕರ ನೇಮಕಾತಿಯ ಸಂದರ್ಶನ ಸಮಿತಿಯು, ವೃಂದಾವನದ ಪ್ರಮುಖ ಧರ್ಮ ಪ್ರಚಾರಕ ಜಯಕಾಂತ್ ಮಿಶ್ರಾ, ಅಯೋಧ್ಯೆಯ ಇಬ್ಬರು ಮಹಂತರಾದ ಮಿಥಿಲೇಶ್ ನಂದಿನಿ ಸರಣ್ ಹಾಗೂ ಸತ್ಯನಾರಾಯಣ ದಾಸ್ ಅವರನ್ನು ಒಳಗೊಂಡಿದೆ.