ಸಮಗ್ರ ನ್ಯೂಸ್: ಮಧ್ಯಪ್ರದೇಶ, ಛತ್ತೀಸಗಢ, ಮಿಜೋರಾಂ, ರಾಜಸ್ಥಾನ ಹಾಗೂ ತೆಲಂಗಾಣ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ನೀತಿ ಸಂಹಿತೆ ಜಾರಿಯಾದ ದಿನದಿಂದ ಈವರೆಗೆ ₹1,760 ಕೋಟಿ ಮೌಲ್ಯದ ಡ್ರಗ್ಸ್ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಐದು ರಾಜ್ಯಗಳಲ್ಲಿ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ವಶಪಡಿಸಿಕೊಂಡ ಪ್ರಮಾಣಕ್ಕಿಂತ 7 ಪಟ್ಟು (₹239.15 ಕೋಟಿ) ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಮತದಾರರಿಗೆ ಹಂಚುವ ಉದ್ದೇಶದಿಂದ ಕೂಡಿಟ್ಟ ನಗದು, ಮದ್ಯ ಮತ್ತು ಬೆಲೆಬಾಳುವ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಯೋಗ ಹೇಳಿದೆ.
ಅ.9ರಂದು ಈ ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು, ಮಧ್ಯಪ್ರದೇಶ, ಛತ್ತೀಸಗಢ ಮತ್ತು ಮಿಜೋರಾಂನಲ್ಲಿ ಈಗಾಗಲೇ ಚುನಾವಣೆ ನಡೆದಿದೆ. ರಾಜಸ್ಥಾನ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ ನ.25 ಮತ್ತು ನ.30ರಂದು ಮತದಾನ ನಡೆಯಲಿದೆ. ಡಿ.3ರಂದು ಈ ಎಲ್ಲಾ ಐದು ರಾಜ್ಯಗಳಲ್ಲಿ ಮತ ಎಣಿಕೆ ನಡೆಯಲಿದೆ.