Ad Widget .

ಸುಳ್ಯದಲ್ಲಿ `ಶೋ’ ತೋರಿಸಿ ಗುಜುರಿ ಪಾಲಾಯಿತೇ ‘ಮತ್ಸ್ಯವಾಹಿನಿ’| ಏಕಾಏಕಿ ತ್ರಿಚಕ್ರ ವಾಹನಗಳನ್ನು ಹೊತ್ತೊಯ್ದದ್ದೆಲ್ಲಿಗೆ?

ಸಮಗ್ರ ನ್ಯೂಸ್: ಸ್ವ ಉದ್ಯೋಗಕ್ಕಾಗಿ ಕಳೆದ 8 ತಿಂಗಳ ಹಿಂದೆ ಸುಳ್ಯಕ್ಕೆ ಬಂದಿದ್ದ ಮೀನುಗಾರಿಕಾ ಇಲಾಖೆಯ ಮತ್ಸ್ಯವಾಹಿನಿ ರಿಕ್ಷಾವನ್ನು ಅನಾಮಿಕು ಹೊತ್ತೊಯ್ದಿದ್ದು, ಈ ಬಗ್ಗೆ ಹಲವು ಅನುಮಾನಗಳು ಮೂಡಿವೆ.

Ad Widget . Ad Widget .

ಈ ಸಮಾಜದಲ್ಲಿ ದುಡಿದು ತಿನ್ನುವರಿಗಿಂತ ಬಡಿದು ತಿನ್ನುವವರೇ ಹೆಚ್ಚು. ಆದರೆ ಸುಳ್ಯದಲ್ಲಿ ಜನತೆ ತಮ್ಮ ಪಾಲಿನ ರೊಟ್ಟಿಯನ್ನು ತಾವೇ ದುಡಿದು ತಿನ್ನುವವರೇ ಹೆಚ್ಚಾಗಿ ಇರುವುದು. ಅಂತಃ ಮನಸ್ಥಿತಿ ಇರುವ ಜನರಿಗೆ ಬಡಿದು ತಿನ್ನುವ ಅಯೋಗ್ಯರು ಅನ್ಯಾಯ ಮಾಡಿಬಿಟ್ಟಿದ್ದಾರೆ.

Ad Widget . Ad Widget .

ಕಳೆದ ಮಾ. 26ರಂದು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸ್ವಾವಲಂಬಿ ಬದುಕಿಗಾಗಿ ಸ್ವ ಉದ್ಯೋಗದಿಂದ ಮನೆ ಬಾಗಿಲಿಗೆ ತಾಜಾ ಮೀನು ಸರಬರಾಜು ಮಾಡುಲು ಮತ್ಸ್ಯವಾಹಿನಿ ಎಂಬ 12 ತ್ರಿಚಕ್ರ ವಾಹನಗಳ ಲೋಕಾರ್ಪಣೆಯನ್ನು ಮಾಡಲಾಗಿತ್ತು. ಚುನಾವಣಾ ಪೂರ್ವದಲ್ಲಿ ಅದ್ದೂರಿಯಾಗಿ ಆಗಿನ ಮೀನುಗಾರಿಕ ಸಚಿವರಾಗಿದ್ದ‌ ಎಸ್. ಅಂಗಾರರೇ ನೆರವೇರಿಸಿದ್ದರು. ಇದೇ ವೇಳೆ ಸ್ವ ಉದ್ಯೊಗಿಗಳಿಗೆ ಪರ ಒಂದಷ್ಟು ಭಾಷಣ ಬಿಗಿದಿದ್ದರು. ಇದಕ್ಕೆ ವೇದಿಕೆಯಲ್ಲಿ ಇದ್ದ ಇನ್ನೂ ಕೆಲವರು ಕೂಡ ಸಾಥ್ ನೀಡಿದ್ದರು. ಇದಕ್ಕೆ ಈ ಸಭೆಯಲ್ಲಿ ಸೇರಿದ ಅಷ್ಟೂ ಮಂದಿಯ ಚಪ್ಪಳೆಯೇ ಸಾಕ್ಷಿ.

ಸಭೆ ಮುಗಿದು ಭರ್ಜರಿ ಮೀನೂಟ ಮಾಡಿ ತೆರಳಿದ ಸಚಿವರು, ಅಧಿಕಾರಿಗಳು, ಕೆಲ ಪಕ್ಷದ ಮುಖಂಡರುಗಳು ಮತ್ತೆ ತಾವು ಲೋಕಾರ್ಪಣೆ ಮಾಡಿದ ‘ಮತ್ಸ್ಯವಾಹಿನಿ’ ತ್ರಿಚಕ್ರ ವಾಹನಗಳು ಏನಾಗಿದೆ? ಫಲಾನುಭವಿಗಳಿಗೆ ತಲುಪಿದೆಯೇ ಎಂದು ಹಿಂತಿರುಗಿ ನೋಡಿದವರೇ ಅಲ್ಲ.

ವಾಹನಗಳನ್ನು ಸುಳ್ಯದ ತಾ.ಪಂ. ಕಛೇರಿ ಬಳಿ `ಶೋ’ಗೆ ನಿಲ್ಲಿಸಲಾಗಿತ್ತು. ಆದರೂ ಅಲ್ಲಿಗೆ ಬರುವ ಒಬ್ಬನೆ ಒಬ್ಬ ಅಧಿಕಾರಿಗಾಗಲೀ, ಜನಪ್ರತಿನಿಧಿಗಾಗಲೀ ಆ ವಾಹನಗಳ ಬಗ್ಗೆ ಕಾಳಜಿ ಇರಲಿಲ್ಲ. ಇತ್ತ ವಾಹನಗಳು ಫಲಾನುಭವಿಗಳಿಗೂ ದೊರಕದೆ ಮಳೆ, ಬಿಸಿಲಿಗೆ ನೆನೆಯುತ್ತಿದೆ, ಇದರಿಂದ ಹಾನಿಗೊಳ್ಳುವ ಭೀತಿ ಇದೆ, ಈ ರೀತಿ ಸರಕಾರದ ಸೊತ್ತುಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ, ಎಂಬ ಸಣ್ಣ ಆಲೋಚನೆ ಕೂಡಾ ಬಂದಿರಲಿಲ್ಲ.

ವಿಧಾನ ಸಭಾ ಚುನಾವಣೆ ದಿನಾಂಕ ಘೋಷಣೆಗೆ ಕೆಲ ದಿನಗಳ ಹಿಂದೆ ಈ ಲೋಕಾರ್ಪಣೆ ಕಾರ್ಯಕ್ರಮ ನಡೆದಿದ್ದು. ರಾಜ್ಯಕ್ಕೆ 300 ವಾಹನಗಳು ಮಂಜೂರಾಗಿತ್ತು. ಅದರಲ್ಲಿ 12 ವಾಹನಗಳನ್ನು ಸುಳ್ಯಕ್ಕೆ ತರಿಸಲಾಗಿತ್ತು. ಆದರೆ ಇದರಲ್ಲಿ ತಾಂತ್ರಿಕ ಅಡಚನೆ ಉಂಟಾಗಿ ಈ ರೀತಿಯ ಅವಾಂತರ ನಡೆದಿದೆ. ವಾಹನದ ಗುತ್ತಿಗೆ ವಹಿಸಿಕೊಂಡಿದ್ದ ಖಾಸಗಿ ಸಂಸ್ಥೆ ಅವರು ಈ ವಾಹನವನ್ನು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರ ಮಾಡಿಲ್ಲ, ಬೆಂಗಳೂರಿನಲ್ಲಿ ಇದರ ನೋಂದಣಿ ಕೂಡ ಆಗಿಲ್ಲ. ಜತೆಗೆ ಅವರಿಗೆ ಪೂರ್ತಿ ಬಿಲ್ ಕೂಡ ಪಾವತಿಯಾಗಿಲ್ಲ‌ ಈ ಎಲ್ಲಾ ಕಾರಣಗಳಿಂದ ಈ ವಾಹನ ಇಲ್ಲೇ ಬಾಕಿಯಾಗಿದೆ. ಇದೀಗ ಹೊಸ ಸರಕಾರ ಅಧಿಕಾರಕ್ಕೆ ಬಂದಿದೆ. ಹಿಂದಿನ ಸರಕಾರ ಕೊನೆ ಕ್ಷಣದಲ್ಲಿ ಕೈಗೊಂಡ ಯೋಜನೆಗಳನ್ನು ತಡೆ ನೀಡಿರುವುದು ಕೂಡ ಇದಕ್ಕೂ ಪರಿಣಾಮ ಬೀರಿದೆ ಎನ್ನಲಾಗಿತ್ತು.

ಆದರೆ ದಿನ ಹೋದಂತೆ 12 ವಾಹನಗಳಲ್ಲಿ ಒಂದೊಂದೇ ವಾಹನ ಮಾಯವಾದರೂ ಯಾರೂ ಕೇಳಲಿಲ್ಲ. ಇದೀಗ ಕೆಲ ದಿನಗಳ ಹಿಂದೆ ಅಲ್ಲಿ ಉಳಿದ ಎಲ್ಲಾ ವಾಹನಗಳು ಕೂಡ ಮಾಯವಾಗಿದೆ. ಇನ್ನೂ ನೋಡಲು ಸಿಗುವುದು ಲೋಕಾರ್ಪಣೆಯಂದು ತೆಗೆದ ಫೋಟೋಗಳು ಮಾತ್ರ. ಯಾಕೆ ಹೀಗಾಯಿತು? ಮತ್ತೊಮ್ಮೆ ವಾಹನಗಳು ಸುಳ್ಯಕ್ಕೆ ಬಂದಿದ್ದು ಯಾಕೆ? ಹೋಗಿದ್ದು ಯಾಕೆ? ಏನು ನೀವು ಜನಗಳನ್ನು ಮಂಗ ಮಡುತ್ತಿದ್ದೀರಾ? ಸರಿಯಾದ ವ್ಯವಸ್ಥೆಗಳು ಆಗದೇ 12 ವಾಹನಗಳನ್ನು ಸುಳ್ಯಕ್ಕೆ ತರಿಸಿದ್ದು ಯಾಕೆ? ನಿಮ್ಮ ಅದ್ದೂರಿ ಕಾರ್ಯಕ್ರಮಕ್ಕೂ, ಟ್ರಾನ್ಸ್ ಪೋರ್ಟ್ ಗೂ ಜನರ ತೆರಿಗೆ ಹಣ ಖರ್ಚು ಮಾಡಿದರೆ ನವ ಭಾರತದ ನಿರ್ಮಾಣದ ಕನಸು ಕನಸಾಗಿಯೇ ಉಳಿಯಬಹುದು ಹೊರತು ಯಾವುದೇ ಅಭಿವೃದ್ಧಿಯಾಗಲು ಸಾಧ್ಯವಿಲ್ಲ.

ಹಾಗಾಗಿ ಸುಳ್ಯಕ್ಕೆ ಬಂದ 12 ತ್ರಿಚಕ್ರ ವಾಹನಗಳು ಎಲ್ಲಿ ಹೋಯಿತು? ಗುಜುರಿಗೆ ಹೋಗಿದ್ಯಾ? ಅಥವಾ ಮತ್ತೆ ಸರಕಾರಕ್ಕೆ ಹಿಂತುರುಗಿಸಿದ್ದಾರಾ? ಎಂಬ ಪ್ರಶ್ನೆ ಸುಳ್ಯದ ಜನರಲ್ಲಿ ಮೂಡಿದೆ. ಹಾಗಾಗಿ ಇದಕ್ಕೆ ಸಂಬಂಧಪಟ್ಟವರು ಉತ್ತರ ನೀಡಬೇಕು. ಮಾನ್ಯ ಶಾಸಕಿಯವರಾದರೂ ಈ ಬಗ್ಗೆ ಗಮನ ಹರಿಸಲಿ ಎಂಬುದಷ್ಟೇ ನಮ್ಮ ಕಾಳಜಿ.

Leave a Comment

Your email address will not be published. Required fields are marked *