ಸಮಗ್ರ ನ್ಯೂಸ್: ಬೆಂಗಳೂರಿನ ಜಯನಗರದಲ್ಲೇ ಅತಿ ಹೆಚ್ಚು ಎಕ್ಯೂಐ ದಾಖಲು.
ಬೆಂಗಳೂರು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ಹದಗೆಟ್ಟು ಆತಂಕ ಸೃಷ್ಟಿಸಿರುವ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮೂರು ದಿನ ಕಾಲ ವಾಯು ಗುಣಮಟ್ಟ ಸೂಚ್ಯಂಕ( ಎಕ್ಯೂಐ) ಹೆಚ್ಚಳವಾಗಿ ಕಳಪೆ ಮಟ್ಟಕ್ಕೆ ತಲುಪಿದೆ.
ದೀಪಾವಳಿ ನಿಮಿತ್ತ ಸಾರ್ವಜನಿಕರು ಪಟಾಕಿ ಸುಟ್ಟ ಪರಿಣಾಮ ನ.12ರಿಂದ ನ.14ರವರೆಗೆ ರಾಜ್ಯದ ಇತರ ಜಿಲ್ಲೆಗಳಗಿಂತ ಬೆಂಗಳೂರಿನ ಜಯನಗರದಲ್ಲಿ ಅತಿ ಹೆಚ್ಚು ಎಕ್ಯೂಐ ದಾಖಲಾಗಿದೆ. ಮಂಗಳೂರು, ಬೀದರ್, ತುಮಕೂರು ಕ್ರಮವಾಗಿ ನಂತರ ಸ್ಥಾನಗಳಿವೆ. ಮಡಿಕೇರಿಯಲ್ಲಿ ಎಕ್ಯೂಐ ವ್ಯಾಲ್ಯೂ 49 ದಾಖಲಾಗಿದ್ದು, ಗಾಳಿ ಗುಣಮಟ್ಟ ಉತ್ತಮವಾಗಿತ್ತು. ಕಳೆದ ವರ್ಷದ ದೀಪಾವಳಿ ಅವಧಿಗೆ ಉಂಟಾಗಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ ಈ ಬಾರಿ ಇದೇ ಅವಧಿಯಲ್ಲಿ ಎಕ್ಯೂಐ ಮಟ್ಟ ಕಡಿಮೆ ಆಗಿರುವುದು ಗಮನಾರ್ಹ. 2022ರಲ್ಲಿ ಅತಿ ಹೆಚ್ಚು 313 ಎಕ್ಯೂಐ ದಾಖಲಾಗಿತ್ತು. ಈ ಬಾರಿ 268ಎಕ್ಯೂಐ ದಾಖಲಾಗಿದೆ.
ಎಕ್ಯೂಐ ವ್ಯಾಲ್ಯೂ ಲೆಕ್ಕಾಚಾರ ಹೇಗೆ?
ಎಕ್ಯೂಐ ವ್ಯಾಲ್ಯೂ 50ರ ಒಳಗಡೆ ಇದ್ದರೆ ಗಾಳಿ ಗುಣಮಟ್ಟ ಉತ್ತಮ, 51ರಿಂದ 100ರೊಳಗೆ ಇದ್ದರೆ ತೃಪ್ತಿಕರ, 101 ರಿಂದ 200ರವರೆಗೆ ಇದ್ದರೆ ಸಾಧಾರಣ, 201 ರಿಂದ 300 ಇದ್ದರೆ ಕಳಪೆ ಹಾಗೂ 401ಗಿಂತ ಮೇಲ್ಪಟ್ಟ ಸೂಚ್ಯಂಕವಿದ್ದರೆ ಅತಿ ಕಳಪೆ ಎಂದು ಗುರುತಿಸಲಾಗುತ್ತದೆ.