ಸಮಗ್ರ ವಿಶೇಷ: ದೀಪಗಳ ಹಬ್ಬ ದೀಪಾವಳಿಯನ್ನು ದೇಶಾದ್ಯಂತ ಸಾಂಪ್ರದಾಯಿಕ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತಿದೆ. ದುಷ್ಟಶಕ್ತಿ ವಿರುದ್ಧದ ಶಿಷ್ಟ ರಕ್ಷಣೆಯ ಸಂಕೇತವನ್ನು ಸೂಚಿಸುವ ಈ ಹಬ್ಬವನ್ನು ಮನೆಗಳು, ದೇವಾಲಯ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಲಾಗುತ್ತದೆ.
ಅಮಾವಾಸ್ಯೆಯ ನಂತರದ ಪಾಡ್ಯದಂದು ದಾನವ ಅರಸನಾದ ಬಲೀಂದ್ರನ ಪೂಜೆಯನ್ನು ನಡೆಸುವುದರಿಂದ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯಲಾಗುತ್ತದೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತದೆ.
ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುವಿನ ಭಕ್ತ, ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿ ಪ್ರಜೆಗಳನ್ನು ಅತ್ಯಂತ ಯೋಗಕ್ಷೇಮದಿಂದ ನೋಡಿಕೊಳ್ಳುತ್ತಿರುತ್ತಾನೆ. ರಾಕ್ಷಸ ರಾಜನಾದರೂ ದಾನ ಧರ್ಮದಿಂದ ಹೆಸರುವಾಸಿಯಾಗಿದ್ದ ಬಲಿ ಮಹಾರಾಜನಿಗೆ ತನ್ನ ರೀತಿಯಲ್ಲಿ ಬೇರೆ ಯಾರು ಪ್ರಜೆಗಳನ್ನು ನೋಡಿಕೊಳ್ಳುವುದಿಲ್ಲ ಎಂಬ ಅಹಂಕಾರ ತಲೆಗೆ ಏರುತ್ತದೆ. ಬಲಿ ರಾಜನ ಸುತ್ತಮುತ್ತಲಿರುವವರೆಲ್ಲ ಕೆಟ್ಟವರಾಗಿರುತ್ತಾರೆ. ತಾನು ಕೆಟ್ಟವನಲ್ಲದಿದ್ದರೂ ತನ್ನ ಸುತ್ತಲಿನ ರಾಕ್ಷಸರು ಮಾಡುತ್ತಿರುವ ಕೆಲಸಗಳನ್ನು ಪರೋಕ್ಷವಾಗಿ ಆತ ಪ್ರೋತ್ಸಾಹ ನೀಡುತ್ತಿರುತ್ತಾನೆ. ಇವರ ಕಾಟ ಹೆಚ್ಚಾಗುತ್ತಿದ್ದಂತೆ ಹೇಗಾದರೂ ಮಾಡಿ ಬಲಿಯನ್ನು ಸಂಹಾರ ಮಾಡಬೇಕೆಂದು ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ.
ದೇವತೆಗಳಿಗೆ ಅಭಯ ನೀಡಿದ ವಿಷ್ಣು ವಾಮನನ (ಬಾಲಕ) ರೂಪದಲ್ಲಿ ಬಲಿ ಮಹಾರಾಜನ ಬಳಿ ಬಂದು ದಾನವನ್ನು ಕೇಳುತ್ತಾನೆ. ಬಲೀಂದ್ರ ರಾಜ ಕೊಡುಗೈ ದಾನಿ. ನಿನಗೆ ಏನು ಬೇಕೆಂದು ಕೇಳು ಎಂದು ವಾಮನನಿಗೆ ಹೇಳುತ್ತಾನೆ. ಆಗ ವಾಮನ, ನನ್ನ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ನೀಡಬಹುದೇ ಎಂದು ಕೇಳುತ್ತಾನೆ
ಭೂಮಿಯನ್ನು ದಾನ ಪಡೆಯುವಾಗ ವಾಮನಮೂರ್ತಿ ಆಕಾಶದ ಉದ್ದಕ್ಕೂ ಬೆಳೆಯುತ್ತಾನೆ. ಒಂದು ಪಾದವನ್ನು ಭೂಮಿ ಮೇಲೆ, ಮತ್ತೊಂದು ಪಾದವನ್ನು ಆಕಾಶದ ಮೇಲೆ ಇರಿಸುತ್ತಾನೆ. ಇನ್ನೊಂದು ಪಾದ ಇಡಲು ಜಾಗ ಕಾಣುತ್ತಿಲ್ಲ ಎಲ್ಲಿ ಇಡಬೇಕು ಎಂದು ಕೇಳಿದಾಗ ಬಲಿ ಚಕ್ರವರ್ತಿಗೆ ಜ್ಞಾನೋದಯವಾಗಿ ನನ್ನ ತಲೆ ಮೇಲೆ ಪಾದ ಇಡು ಎಂದು ಹೇಳುತ್ತಾನೆ.
ನನ್ನ ತಲೆ ಮೇಲೆ ನಿಮ್ಮ ಪಾದ ಇಡುವ ಮೂಲಕ ನನ್ನಲ್ಲಿರುವ ಅಹಂಕಾರವೆಲ್ಲ ನಾಶವಾಗಲಿ ಎಂದು ವಾಮನನ ಬಳಿ ಬಲಿ ಕ್ಷಮೆ ಕೇಳುತ್ತಾನೆ. ವಾಮನ ತನ್ನ ಪಾದವನ್ನು ಬಲೀಂದ್ರ ಮಹಾರಾಜನ ಮೇಲೆ ಇರಿಸಿ ಪಾತಾಳಕ್ಕೆ ಕಳುಹಿಸುತ್ತಾನೆ.
ತಲೆ ಮೇಲೆ ಕಾಲನ್ನು ಇಡುವ ಮುನ್ನ ವಾಮನ ಬಳಿ ಬಲಿ, ನಾನು ನನ್ನ ಮಕ್ಕಳಂತೆ ಪ್ರಜೆಗಳನ್ನು ನೋಡಿದ್ದೇನೆ. ಹೀಗಾಗಿ ಪ್ರಜೆಗಳನ್ನು ನೋಡಲು ಅವಕಾಶ ನೀಡಬೇಕೆಂದು ಪ್ರಾರ್ಥನೆ ಮಾಡಿಕೊಳ್ಳುತ್ತಾನೆ. ಈ ಪ್ರಾರ್ಥನೆ ಸ್ವೀಕರಿಸಿದ ವಾಮನ ಅಸ್ತು ಎಂದು ಹೇಳಿ ತಲೆಯ ಮೇಲಿಟ್ಟು ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ.