ಸಮಗ್ರ ನ್ಯೂಸ್: ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲರವರು ಮುಕ್ರಂಪಾಡಿಯಲ್ಲಿ ಹೊಂದಿರುವ ಪುತ್ತಿಲ ಪರಿವಾರದ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ನಾಲ್ವರು ಸಹಚರರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿ ಕಿರುಚಾಡಿದ ಘಟನೆ ನಡೆದಿದೆ.
ಅರುಣ್ ಪುತ್ತಿಲ ಬೆಂಬಲಿಗರಾದ ಮನೀಶ್ ಕುಲಾಲ್ ಬನ್ನೂರು ಅವರನ್ನು ಗುರಿಯಾಗಿಟ್ಟುಗೊಂಡು ದಿನೇಶ್ ಪಂಜಿಗ ಎಂಬಾತ ನಾಲ್ವರು ಯುವಕರೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದರು. ಪುತ್ತಿಲ ಕಚೇರಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ ಮತ್ತಿತರರು ಇದ್ದರು. ಮನೀಶ್ ಕುಲಾಲ್ ಕಚೇರಿಯಲ್ಲಿ ಇರಲಿಲ್ಲ. ಮಾಹಿತಿ ತಿಳಿದ ಮನೀಶ್ ಕುಲಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಟ್ಸಾಪ್ ಗ್ರೂಪ್ನಲ್ಲಿ ನಡೆದ ಚರ್ಚೆಯ ಕೋಪದಲ್ಲಿ ಈ ಕೃತ್ಯ ನಡೆದಿದೆ. ಹಾಡಹಗಲೇ ತಲವಾರು ಹಿಡಿದುಕೊಂಡು ಪರಿಸ್ಥಿತಿಯಲ್ಲಿ ಉಂಟಾಗಿರುವುದು ಜನರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ನಡೆದ ತಕ್ಷಣವೇ ಆರೋಪಿಗಳಾದ ಪುತ್ತೂರು ಶಾಂತಿಗೋಡು ಗ್ರಾಮದ ದಿನೇಶ ಪಂಜಿಗ (38), ನರಿಮೊಗರು ಗ್ರಾಮದ ಭವಿತ್ (19), ಪುತ್ತೂರು ಬೊಳ್ವಾರು ನಿವಾಸಿ ಮನ್ವಿತ್ (19), ಆರ್ಯಾಪು ಗ್ರಾಮದ ಜಯಪ್ರಕಾಶ (18), ಚಿಕ್ಕಮುಡ್ನೂರು ಗ್ರಾಮದ ಚರಣ್ (23), ಬನ್ನೂರು ಗ್ರಾಮದ ಮನೀಶ (23), ವಿನೀತ್ ಹಾಗೂ ಇಬ್ಬರು ಅಪ್ರಾಪ್ತ ಪ್ರಾಯದ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ: 108/2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.