ಕೇರಳದ ಪುನ್ನತ್ತೂರು ಕೊಟ್ಟಾದಲ್ಲಿರುವ ಗುರುವಾಯೂರು ದೇವಸ್ವಂನ ಆನೆ ಶಿಬಿರದಲ್ಲಿ ಆನೆಯೊಂದು ತನ್ನ ಸಹಾಯಕ ಮಾವುತನನ್ನೇ ತುಳಿದು ಕೊಂದಿರುವ ಘಟನೆ ವರದಿಯಾಗಿದೆ.
ಚಂದ್ರಶೇಖರನ್ ಎಂಬ ಹೆಸರಿನ ಒಂಟಿ ದಂತದ ಆನೆಯು ಅಶಿಸ್ತಿನಿಂದ ವರ್ತಿಸುತ್ತಿತ್ತಲ್ಲದೇ, ಅಪಾಯಕಾರಿಯಾಗಿಯೂ ತೋರುತ್ತಿದ್ದ ಕಾರಣ ಅದನ್ನು ಎಂದಿಗೂ ಶಿಬಿರದಿಂದ ಹೊರಗೆ ಕರೆತಂದಿರಲಿಲ್ಲ.
ಬುಧವಾರ ಮಧ್ಯಾಹ್ನ ರತೀಶ್ ಎಂಬ ಮಾವುತ ಆನೆಗೆ ನೀರು ಕುಡಿಸಲು ಹೋದಾಗ ಆತ ತನಗೆ ತೊಂದರೆ ನೀಡಲು ಬಂದಿದ್ದಾನೆಂದು ಭಾವಿಸಿ ತುಳಿದುಬಿಟ್ಟಿದೆ. ರತೀಶ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟದ್ದಾರೆ.
ಆನೆ ಮೊದಲಿನಿಂದಲೂ ಕೋಪ ಸ್ವಭಾವದ್ದಾಗಿತ್ತು. ಈ ಹಿಂದೆಯೂ ಚಂದ್ರಶೇಖರನ್ ಇಂತಹ ಕೃತ್ಯ ಎಸಗಿದ್ದ. ಆತನ ಆಕ್ರಮಣಕಾರಿ ಸ್ವಭಾವದಿಂದಾಗಿ, ಕಳೆದ 3 ದಶಕಗಳಿಂದಲೂ ಆತನನ್ನು ಹೊರಗೆ ಕರೆದುಕೊಂಡು ಬಂದಿರಲಿಲ್ಲ. ಇದಕ್ಕೂ ಮುನ್ನ ಕೂಡಾ ಚಂದ್ರಶೇಖರನ್ ಮಾವುತ, ಸಹ ಆನೆಗಳ ಮೇಲೆ ದಾಳಿ ಮಾಡಿದ್ದ ಎನ್ನಲಾಗಿದೆ. ಇದೀಗ ಹಬ್ಬ ಎನ್ನುವ ಕಾರಣಕ್ಕೆ ಆತನನ್ನು ಹೊರಗೆ ಕರೆತರಲಾಗಿತ್ತು.
ಮುಖ್ಯ ಮಾವುತ ರಜೆಯಲ್ಲಿದ್ದು, ಅವರ ಜಾಗಕ್ಕೆ ಮತ್ತೊಬ್ಬ ಮಾವುತ ರತೀಶ್ ಬಂದಿದ್ದರು. ಆನೆಗೆ ನೀರು ಕೊಡಲು ಹೋದ ತಕ್ಷಣ ಆನೆ ಆತನನ್ನು ಎತ್ತಿ ಎಸೆದಿದೆ. ಘಟನೆಯ ನಂತರ ಗಾಯಾಳು ರತೀಶ್ ನನ್ನು ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಪ್ರಯೋಜನವಾಗಲಿಲ್ಲ.