ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಹುಲಿವೇಷ ತಂಡಗಳಲ್ಲಿ ಒಂದಾದ ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡದ ಪ್ರಮುಖ ನಾಯಕನನ್ನು ದುಷ್ಕರ್ಮಿಗಳು ತಲವಾರ್‌ನಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಆತಂಕಕಾರಿ ಘಟನೆ ನಿನ್ನೆ ರಾತ್ರಿ ನಡೆದಿದೆ.
ಕಲ್ಲೇಗ ಟೈಗರ್ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ (26) ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೆಹರೂ ನಗರ ಜಂಕ್ಷನ್‌ನಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕಡಿದು ಹತ್ಯೆ ಮಾಡಲಾಗಿದ್ದು, ಅಕ್ಷಯ್ ಕಲ್ಲೇಗ ಪುತ್ತೂರಿನಲ್ಲಿ ಇದ್ದಾಗ ಆಗಮಿಸಿದ ತಂಡಯೊಂದು ಯದ್ವಾತದ್ವಾ ತಲವಾರ್‌ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ.
ಪುತ್ತೂರಿನ ಕಲ್ಲೇಗ ಟೈಲರ್ ಮುಖ್ಯಸ್ಥ ಅಕ್ಷಯ್ ಕಲ್ಲೇಗನನ್ನು ಮಚ್ಚಿನಿಂದ ಕಡಿದು ಹತ್ಯೆ ಮಾಡಿದ ಬೆನ್ನಲ್ಲೇ ಆರೋಪಿಗಳಾದ ಬನ್ನೂರು ನಿವಾಸಿ ಮನೀಷ್ ಮತ್ತು ಚೇತು ಪೊಲೀಸ್ ಠಾಣೆಗೆ ಶರಣಾಗಿದ್ದು, ಮತ್ತೋರ್ವ ಆರೋಪಿ ತಲೆಮಲೆಸಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಕೊಲೆಗೆ ಕಾರಣವೇನು?
ಮೂಲಗಳ ಪ್ರಕಾರ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಗಲಾಟೆ ಆರಂಭವಾಗಿದ್ದು, ಈ ಎರಡು ಸಾವಿರ ರೂಪಾಯಿ ನೀಡುವ ವಿಚಾರದಲ್ಲಿ ಮಾತುಕತೆ ವಿಕೋಪಕ್ಕೆ ಹೋಗಿದೆ. ಮಾತುಕತೆ ವಿಕೋಪಕ್ಕೆ ಹೋಗುತ್ತಿದ್ದಂತೆ ಖಾಸಗಿ ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗನಿಗೆ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ಉಂಟಾಗಿದ್ದು, ಕೊನೆಗೆ ಅಕ್ಷಯ್ ಕಲ್ಲೇಗನನ್ನು ಮೂರಕ್ಕೂ ಅಧಿಕ ಮಂದಿಯ ತಂಡ ಅಟ್ಟಾಡಿಸಿ ಹೋಗಿ ತಲವಾರಿನಿಂದ ದಾಳಿ ನಡೆಸಿದೆ.
ಇನ್ನು, ಅಕ್ಷಯ್ ಕಲ್ಲೇಗನ ಹತ್ಯೆಗೆ ಬೇರೆ ಕಾರಣಗಳು ಇದೆಯಾ ಎಂಬ ಬಗ್ಗೆಯೂ ಪೊಲೀಸರ ತನಿಖೆ ನಡೆಸುತ್ತಿದ್ದಾರೆ. ಅಕ್ಷಯ್‌ನ ಮೃತದೇಹ ಪೆಟ್ರೋಲ್ ಪಂಪ್ ಬಳಿಯ ಪೊದೆಯೊಂದರಲ್ಲಿ ರಕ್ತಸಿಕ್ತವಾಗಿ ಪತ್ತೆಯಾಗಿತ್ತು. ಇತ್ತ ತನ್ನ ಮಗ ಹತ್ಯೆಯಾದ ಸುದ್ದಿ ತಿಳಿಯುತ್ತಿದ್ದಂತೆ ಮೃತನ ತಂದೆ ದಿಕ್ಕೇ ತೋಚದೆ ಅಕ್ಷಯ್ ಅಕ್ಷಯ್ ಎಂದು ಒಂದೇ ಉಸಿರಿನಲ್ಲಿ ಅಳುತ್ತಿರುವುದು ಕಂಡು ನೆರೆದವರ ಹೃದಯ ಮಿಡಿದಿತ್ತು.
ಹುಲಿ ಕುಣಿತದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್ ಭಾರೀ ಹೆಸರು ಮಾಡಿದ್ದ. ಕಳೆದ ವರ್ಷದ ಬಿಗ್‌ಬಾಸ್ ಶೋನಲ್ಲಿ ರೂಪೇಶ್ ಶೆಟ್ಟಿ ಮನವಿ ಮೇರೆಗೆ ಕಲ್ಲೇಗ ಟೈಗರ್ಸ್ ತಂಡವನ್ನು ಕರೆಸಿಕೊಂಡು ಹುಲಿವೇಷ ನೃತ್ಯವನ್ನು ಮಾಡಲಾಗಿತ್ತು.
ಹುಲಿವೇಷದಲ್ಲಿ ಕಲ್ಲೇಗ ಟೈಗರ್ಸ್ ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.