ಸಮಗ್ರ ನ್ಯೂಸ್: ಪೇಜಾವರ ಮಠದ ಮಠಾಧಿಪತಿಗಳಾದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಪೂರ್ವಾಶ್ರಮದ ತಂದೆಯವರಾದ ಅಂಗಡಿಮಾರು ಕೃಷ್ಣಭಟ್ಟ ನಿಧನರಾಗಿದ್ದಾರೆ ಅವರಿಗೆ 103 ವರ್ಷ ಆಗಿತ್ತು.
ಸಾಂಪ್ರದಾಯಿಕ ಕೃಷಿಕರೂ, ವೈದಿಕ ವಿದ್ವಾಂಸರೂ ಆಗಿದ್ದ ಅವರು ತುಳು ಲಿಪಿಕಾರರಾಗಿ, ಪಂಚಾಂಗ ಕರ್ತರಾಗಿ ಅನೇಕ ಕನ್ನಡ ಹಾಗೂ ತುಳು ಭಜನೆ, ಪ್ರಾರ್ಥನಾ ಶ್ಲೋಕಗಳನ್ನು ರಚಿಸುವ ಮೂಲಕ ಸಾರಸ್ವತ ಲೋಕಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದರು.
ಐದು ವೇದಗಳನ್ನು ಅಧ್ಯಯನ ಮಾಡಿರುವ ಇವರು ಸಂಹಿತಾ ಯಾಗಗಳು, ಮತ್ತಿನ್ನಿತರ ಯಾಗಗಳನ್ನು ಮಾಡಿರುವ ಸಾಧಕರೆನಿಸಿದ್ದರು. ದಶಕಗಳ ಹಿಂದೆ ಪತ್ನಿ ಯಮುನಾ ಭಟ್ ಅವರನ್ನು ಕಳೆದುಕೊಂಡಿದ್ದ ಇವರು ತನ್ನ 8ನೇ ಪುತ್ರ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಅವರ ಸಹಿತ ಐದು ಮಂದಿ ಪುತ್ರರು ಹಾಗೂ ಏಳು ಮಂದಿ ಪುತ್ರಿಯರನ್ನು ಅಲ್ಲದೇ ಅಪಾರ ಅಭಿಮಾನಿಗಳನ್ನು ಅಗಲಿರುವರು
ಇವರು ಗೈದಿರುವ ಜೀವಮಾನ ಸಾಧನೆಗಾಗಿ ಕೃಷ್ಣಾನುಗ್ರಹ ಪ್ರಶಸ್ತಿ, ಕಲ್ಕೂರ ಪ್ರತಿಷ್ಠಾನದಿಂದ ನೀಡಲಾದ ಪೇಜಾವರ ಶ್ರೀ ಜೀವಮಾನ ಪ್ರಶಸ್ತಿ, ಬ್ರಾಹ್ಮಣರ ಸಮ್ಮೇಳನದ ಗೌರವ ಪುರಸ್ಕಾರ ಸಹಿತ ಅನೇಕಾನೇಕ ಗೌರವಗಳು ಪ್ರಾಪ್ತವಾಗಿವೆ.