ಸಮಗ್ರ ನ್ಯೂಸ್: ನಸುಕಿನ ವೇಳೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ವಿರಾಜಪೇಟೆಯ ನಿವಾಸಿಗಳಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬಗ್ಗೆ ವರದಿಯಾಗಿದೆ.
ವಿರಾಜಪೇಟೆಯ ವ್ಯಾಪಾರಿ ಹುಸೇನ್ ಹಾಗೂ ಅವರ ಮಗ ಎಸ್.ಹೆಚ್. ಹುಮಾಯುನ್ ಎಂಬ ಇಬ್ಬರು ಇಂದು ಮುಂಜಾನೆ 4.30ರ ಸಮಯದಲ್ಲಿ ಮಾರುತಿ ಕಾರಿನಲ್ಲಿ ಹುಣಸೂರಿಗೆ ತೆರಳುತ್ತಿದ್ದರು. ಮಾರ್ಗಮಧ್ಯದ ತಿತಿಮತಿಯ ಬಿ.ಸಿ.ಕೆ. ಎಸ್ಟೇಟ್ ಬಳಿ ಹುಣಸೂರು ಕಡೆಯಿಂದ ಅಜಾಗರೂಕತೆಯಿಂದ ಅತೀ ವೇಗವಾಗಿ ಬಂದ ಕಾರು ಹುಮಾಯುನ್ ಅವರು ಚಲಾಯಿಸುತ್ತಿದ್ದ ಮಾರುತಿ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯಾದ ಪರಿಣಾಮ ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು ಅದರಲ್ಲಿದ್ದ ಹುಮಾಯುನ್ ಮತ್ತು ಅವರ ತಂದೆ ಹುಸೇನ್ ರವರು ಗಾಯಕ್ಕೊಳಗಾಗಿದ್ದು ನಂತರ ಇವರಿಬ್ಬರನ್ನು ಗೋಣಿಕೊಪ್ಪ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಅಪಘಾತಕ್ಕೆ ಕಾರಣವಾದ ಕಾರಿನಲ್ಲಿ ಕೇರಳ ಇರಿಟ್ಟಿಯ ಬಿನೋಯ್ ಥೋಮಸ್ ಮತ್ತು ಬಿನು ಥೋಮಸ್ ಎಂಬಿಬ್ಬರು ಪ್ರಯಾಣಿಸುತ್ತಿದ್ದರು. ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಈ ಕಾರಿನ ಚಾಲಕನ ವಿರುದ್ದ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.







