ಸಮಗ್ರ ನ್ಯೂಸ್: ಕರ್ನಾಟಕ ಮೂಲಕ ನ್ಯೂಜಿಲ್ಯಾಂಡ್ ತಂಡದ ಯುವ ಆಟಗಾರ ರಚೀನ್ ರವೀಂದ್ರ ಪಾಕಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿ ಹಲವರ ದಾಖಲೆಯನ್ನು ಮುರಿದಿದ್ದಾರೆ.
ಇದು ರಚೀನ್ ಅವರ ಚೊಚ್ಚಲ ವಿಶ್ವಕಪ್ ಟೂರ್ನಿ ಇಲ್ಲಿ ಮೂರು ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರಚಿನ್ ಪಾಕ್ ಬೌಲರ್ಗಳಿಗೆ ಸರಿಯಾಗಿ ದಂಡಿಸಿ ಮೆರೆದಾಡಿದರು. 94 ಎಸೆತಗಳನ್ನು ಎದುರಿಸಿ 15 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 108 ರನ್ ಕಲೆ ಹಾಕಿ ಶತಕ ಸಂಭ್ರಮಿಸಿದರು. ಇದೇ ವೇಳೆ ಹಲವು ದಾಖಲೆಯನ್ನು ಕೂಡ ಬರೆದರು.
ರಚಿನ್ ಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರ ವಿಶ್ವಕಪ್ನ ದಾಖಲೆಯೊಂದನ್ನು ಮುರಿದರು. ಅತಿ ಕಿರಿಯ ವಯಸ್ಸಿನಲ್ಲಿ 3 ಶತಕ ಬಾರಿಸಿದ ಆಟಗಾರ ಎನಿಸಿಕೊಂಡರು. ಸಚಿನ್ ಅವರು 1996 ವಿಶ್ವಕಪ್ ಟೂರ್ನಿಯಲ್ಲಿ 2 ಶತಕ ಬಾರಿಸಿದ್ದರು. ಈ ದಾಖಲೆಯನ್ನು ರಚಿನ್ ಅವರು ಕಳೆದ ಆಸೀಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಸರುಗಟ್ಟಿದ್ದರು. ಇದೀಗ ಪಾಕ್ ವಿರುದ್ಧ ಶತಕ ಬಾರಿಸಿ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ. ಉಭಯ ಆಟಗಾರರು ಈ ದಾಖಲೆಯನ್ನು 23 ವರ್ಷದಲ್ಲಿ ಮಾಡಿದ್ದಾರೆ.
25 ವರ್ಷದ ಒಳಗೆ ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ಅವರ ದಾಖಲೆಯನ್ನು ಕೂಡ ರಚಿನ್ ಸರಿಗಟ್ಟಿದ್ದಾರೆ. ಸಚಿನ್ ಅವರು 1996ರ ವಿಶ್ವಕಪ್ ಟೂರ್ನಿಯಲ್ಲಿ 523 ರನ್ ಬಾರಿಸಿದ್ದರು. ಸದ್ಯ ರಚಿನ್ ಕೂಡ 523* ರನ್ ಬಾರಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಕೇವಲ ಒಂದು ರನ್ ಗಳಿಸಿದರೂ ಸಚಿನ್ ದಾಖಲೆ ಪತನಗೊಳ್ಳಲಿದೆ.
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ನ್ಯೂಜಿಲ್ಯಾಂಡ್ ಪರ ಮೂರು ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ರಚಿನ್ ಬರೆದಿದ್ದಾರೆ. ಅಲ್ಲದೆ ವಿಶ್ವಕಪ್ ಆವೃತ್ತಿಯೊಂದರಲ್ಲಿ 500 ರನ್ ಗಡಿ ದಾಟಿದ ನ್ಯೂಜಿಲ್ಯಾಂಡ್ನ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕೇನ್ ವಿಲಿಯಮ್ಸನ್ (2019 ರಲ್ಲಿ 578) ಮತ್ತು ಮಾರ್ಟಿನ್ ಗಪ್ಟಿಲ್ (2015 ರಲ್ಲಿ 547 ) ರನ್ ಬಾರಿಸಿದ್ದರು.
ಚೊಚ್ಚಲ ವಿಶ್ವಕಪ್ ಆಡಿ ಅತ್ಯಧಿಕ ರನ್ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಪಾಕ್ ನಾಯಕ ಬಾಬರ್ ಅಜಂ ಅವರನ್ನು ರಚಿನ್ ಹಿಂದಿಕ್ಕಿದ್ದಾರೆ. 523 ರನ್ ಗಳಿಸಿ ಬಾಬರ್ ಅವರ ದಾಖಲೆಯನ್ನು ಮುರಿದರು. ಬಾಬರ್ 2019ರ ಆವೃತ್ತಿಯ ವಿಶ್ವಕಪ್ನಲ್ಲಿ ಚೊಚ್ಚಲ ಬಾರಿ ಕಣಕ್ಕಿಳಿದು 474 ರನ್ ಬಾರಿಸಿ ಇದುವರೆಗೆ 2ನೇ ಸ್ಥಾನದಲ್ಲಿದ್ದರು. ಈಗ ಮೂರಕ್ಕೆ ಜಾರಿದ್ದಾರೆ. ದಾಖಲೆ ಜಾನಿ ಬೇರ್ಸ್ಟೋ ಹೆಸರಿನಲ್ಲಿದೆ. ಅವರು 2019ರ ಆವೃತ್ತಿಯಲ್ಲಿ 11 ಪಂದ್ಯ ಆಡಿ 532 ರನ್ ಬಾರಿಸಿದ್ದರು. ರಚಿನ್ ಅವರು ಮುಂದಿನ ಪಂದ್ಯದಲ್ಲಿ 10 ರನ್ ಬಾರಿಸಿದರೆ ಬೇರ್ಸ್ಟೋ ದಾಖಲೆ ಪತನಗೊಳ್ಳಲಿದೆ.