ಸಮಗ್ರ ನ್ಯೂಸ್: ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಕರ್ನಾಟಕ ಮೂಲದ ನ್ಯೂಜಿಲೆಂಡ್ ತಂಡದ ಎಡಗೈ ಬ್ಯಾಟ್ಸ್‍ಮನ್ ರಚಿನ್ ರವೀಂದ್ರ ಅಮೋಘ ಶತಕ ಗಳಿಸುವ ಮೂಲಕ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.
25 ವರ್ಷಕ್ಕೂ ಮುನ್ನ ಭಾರತದ ಕ್ರಿಕೆಟ್ ದೇವರು ತೆಂಡೂಲ್ಕರ್ ಏಕದಿನ ವಿಶ್ವಕಪ್‍ನಲ್ಲಿ 2 ಶತಕಗಳನ್ನು ಬಾರಿಸಿದ್ದರು. ಇದೀಗ ರಚಿನ್ ರವೀಂದ್ರ ತನ್ನ ಮೊದಲ ಏಕದಿನ ವಿಶ್ವಕಪ್‍ನಲ್ಲಿ ಮೂರನೇ ಶತಕವನ್ನು ಬಾರಿಸುವ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದಾರೆ. ರಚಿನ್ ರವೀಂದ್ರ ಅವರಿಗೆ ಇದೀಗ 23 ವರ್ಷ ವಯಸ್ಸು.
94 ಎಸೆತಗಳನ್ನು ಎದುರಿಸಿದ ರಚಿನ್ 15 ಬೌಂಡರಿ ಮತ್ತು 1 ಸಿಕ್ಸ್‍ನ ಮೂಲಕ 108 ರನ್ನುಗಳನ್ನು ಬಾರಿಸಿದ್ದು, ಈ ಶತಕದ ನೆರವಿನಿಂದ ನ್ಯೂಜಿಲೆಂಡ್ 401 ರನ್ನುಗಳನ್ನು ಗಳಿಸಿ ಪಾಕಿಸ್ತಾನಕ್ಕೆ 402 ರನ್ನುಗಳ ಗುರಿಯನ್ನು ನೀಡಿದೆ.
ಕರ್ನಾಟಕ ಮೂಲದ ರಚಿನ್ ರವೀಂದ್ರ ಕುಟುಂಬ ಈಗ ನ್ಯೂಜಿಲೆಂಡ್‍ನಲ್ಲಿ ನೆಲೆಸಿದ್ದು, ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶತಕವನ್ನು ಗಳಿಸಿದ್ದು ಸ್ಮರಣೀಯ ಕ್ಷಣವಾಗಿದೆ.