ಸಮಗ್ರ ನ್ಯೂಸ್: ಸುಳ್ಯದ ಪರಿವಾರಕಾನದಲ್ಲಿನ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಗುಂಡಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ. ಈ ಫೋಟೋ ಹಾಗೂ ವಿಡಿಯೋ ಎಲ್ಲ ಕಡೆ ವೈರಲ್ ಆಗುತ್ತಿದ್ದು, ಏಕಾಏಕಿ ಭೂಮಿ ಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಶಂಕೆ ಉಂಟಾಗಿದೆ.
ಸುಳ್ಯದಲ್ಲಿ ಜೋರಾದ ಮಳೆ ಸುರಿದಿದ್ದು, ಈ ಹಿನ್ನಲೆಯಲ್ಲಿ ಭೂಕುಸಿತ ಆಗಿದೆ ಎನ್ನುವುದು ಕೆಲವರ ಹೇಳಿಕೆ. ಆದರೆ ಇಂಟರ್ ಲಾಕ್ ಅಳವಡಿಸಿರುವ ಭೂಮಿಯಡಿ ನೀರು ರಭಸವಾಗಿ ನುಗ್ಗದಿದ್ದರೂ ಭೂಕುಸಿತ ಹೇಗೆ ಸಂಭವಿಸಿತು ಎನ್ನುವುದು ಪ್ರಶ್ನೆ.
ಗುಂಡಿ ಪಕ್ಕದಲ್ಲಿ ಇರುವ ವಿದ್ಯುತ್ ಕಂಬವೂ ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಪ್ರತಿ ದಿನವೂ ಹೋಟೆಲ್ ಗೆ ಬರುವ ಕಾರುಗಳು ಅಲ್ಲಿ ಕೂಡ ಪಾರ್ಕಿಂಗ್ ಮಾಡುತ್ತಿದ್ದರು. ಆದರೆ ಇಂದು ಅದೃಷ್ಟವಶಾತ್ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತಂತೆ ನ.ಪಂ ಮುಖ್ಯಾಧಿಕಾರಿ ಜೊತೆ ವಿವರ ಕೇಳಿದ್ದು, ಸ್ಥಳ ಪರಿಶೀಲನೆ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ‘ಸುಡಾ’ ರೂಪುರೇಷೆಗಳ ಅಡಿಯಲ್ಲಿ ಕಟ್ಟಡ ನಿರ್ಮಾಣವಾಗಿದ್ದರೂ ಇದೀಗ ಕಟ್ಟಡದ ಬಳಿ ಕುಸಿತವಾಗಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.