ಸಮಗ್ರ ನ್ಯೂಸ್: ರಾಜ್ಯದಲ್ಲಿ ಕನ್ನಡದಂತೆ ತುಳುವಿಗೂ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು, ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಒತ್ತಾಯ ಕನ್ನಡ ರಾಜ್ಯೋತ್ಸವದ ದಿನವೇ ಕೇಳಿಬಂದಿದೆ. ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಅನೇಕರು #TuluOfficialInKA_KL ಹಾಗೂ #TuluTo8thSchedule ಹ್ಯಾಷ್ ಟ್ಯಾಗ್ ಬಳಸಿ ಈ ಬಗ್ಗೆ ಬುಧವಾರ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ಕನ್ನಡ ಸತ್ಯ. ಆದರೆ, ನಮಗೆ ತುಳುವೇ ನಿತ್ಯ. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಈ ರಾಜ್ಯದಲ್ಲಿ ತುಳು ಭಾಷೆಗೂ ಕನ್ನಡದಂತೆ ಮಾನ್ಯತೆ, ಮರ್ಯಾದೆ ಸಿಗಲಿ. ತುಳುವರೂ ಇದು ನಮ್ಮ ರಾಜ್ಯ ಎನ್ನುವಂತಾಗಲಿ’ ಎಂದು ವ್ಯಕ್ತಿಯೊಬ್ಬರು ಲೈವ್‌ಲಿ ಮಂಗಳೂರಿಯನ್ ಎಂಬ ‘ಎಕ್ಸ್’ ಖಾತೆ ಮೂಲಕ ಹಂಚಿಕೊಂಡಿದ್ದಾರೆ.
‘ಮಾತೃಭಾಷೆಯನ್ನು ಪೂಜಿಸುವ, ಇತರೆ ಭಾಷೆಗಳನ್ನು ಗೌರವಿಸುವ. ಕರ್ನಾಟಕದಲ್ಲಿ ತುಳು, ಕೊಡವ, ಕೊಂಕಣಿ ಭಾಷೆಗಳಿಗೂ ಅಧಿಕೃತ ಸ್ಥಾನಮಾನ ನೀಡಿದರೆ ಕರ್ನಾಟಕ ರಾಜ್ಯೋತ್ಸವ ದ ಆಚರಣೆ ಅರ್ಥಪೂರ್ಣವಾಗುತ್ತದೆ. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು’ ಎಂದು ಪ್ರಶಾಂತ್ ಎಂ. ಉಬರ್ ಬರೆದುಕೊಂಡಿದ್ದಾರೆ
‘ತುಳುವಿಗೆ ಮಾನ್ಯತೆ ಬೇಕು ಎನ್ನುವಾಗ ತುಳುನಾಡಿನ ಎಲ್ಲ ಯುವಜನರು ಜಾತಿ ಧರ್ಮ ರಾಜಕೀಯ ಭೇದ ಮರೆತು ಒಂದಾಗುವುದನ್ನು ನೋಮುವಾಗ ಮನಸ್ಸಿಗೆ ಸಂತೋಷವಾಗುತ್ತದೆ. ಆದರೆ, ಈ ಒತ್ತಾಯ ನಿಮಗೆ ಕೇಳಿಸದಿರುವುದು ನೋಡುವಾಗ, ತುಳುವರ ನೋವು ನಿಮಗೆ ತಾಕದಿರುವುದನ್ನು ನೋಡುವಾಗ ಮನಸ್ಸು ಭಾರವಾಗುತ್ತದೆ’ ಎಂದು ಡಿ.ಜೆ.ಅರುಣ್ ಎಸ್.ಪಳ್ಳಿ ಮುಖ್ಯಮಂತ್ರಿಯವರೂ ಸೇರಿದಂತೆ ವಿವಿಧ ರಾಜಕಾರಣಗಳ ಹೆಸರನ್ನು ಟ್ಯಾಗ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಸರ್ಕಾರಕ್ಕೆ ಕನ್ನಡ ಕವಿಗಳಿಗೆ ಶುಭಾಶಯ ಕೋರಲು ಹಾಗೂ ಕನ್ನಡ ಸಾಹಿತ್ಯವನ್ನು ಸ್ಮರಿಸಲು ಸಮಯವಿದೆ, ಆದರೆ ತುಳು ಕವಿಗಳ ಹಾಗೂ ಹಳೆಯ ತುಳು ಸಾಹಿತ್ಯದ ವಿಚಾರದಲ್ಲಿ ತಾರತಮ್ಯ ಏಕೆ. ತುಳು ಅಕಾಡೆಮಿಗೆ, ತುಳು ಸ್ಮಾರಕಗಳನ್ನು ಉಳಿಸುವುದಕ್ಕೆ ತುಳು ಅಧ್ಯಾಪಕರಿಗೆ ಸಂಬಳ ನೀಡುವುದಕ್ಕೆ ಹಣವಿಲ್ಲ ಏಕೆ’ ಎಂದು ಎಂದು ನವನೀತ ಶೆಟ್ಟಿ ಪ್ರಶ್ನಿಸಿದ್ದಾರೆ
‘ನಾವು ತುಳುವರು ತುಳುವಿಗೆ ಅಧಿಕೃತ ಭಾಷೆಯ ಸ್ಥಾನ ನೀಡುವಂತೆ ಕರ್ನಾಟಕ ಮತ್ತು ಕೇರಳ ಸರ್ಕಾರಗಳನ್ನು ಒತ್ತಾಯಿಸುತ್ತಿದ್ದೇವೆ. ಅದು ಸಾಧ್ಯವಾಗದಿದ್ದರೆ ನಾವು ಪ್ರತ್ಯೇಕ ತುಳುನಾಡಿಗೆ ಬೇಡಿಕೆ ಇಡಬೇಕಾಗುತ್ತದೆ ಎಂದು ಸುಭಿಕ್ಷ್ ರೈ ಪಿ. ಸಂದೇಶ ಹಂಚಿಕೊಂಡಿದ್ದಾರೆ.
‘ಕರ್ನಾಟಕದಲ್ಲಿ ತುಳು ಭಾಷೆಗೆ ಅಧಿಕೃತ ಭಾಷಾ ಸ್ಥಾನಮಾನ ನೀಡಿ ಇಲ್ಲದಿದ್ದಲ್ಲಿ ತುಳುನಾಡು ರಾಜ್ಯಕ್ಕೆ ಮುನ್ನುಡಿ ಬರೆಯಿರಿ’ ಎಂದು ಅಕ್ಷಯ್ ಎಚ್ಚರಿಸಿದ್ದಾರೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದಲ್ಲಿ ತುಳುವರ ಬಗ್ಗೆ ಹೊಗಳಿದ್ದನ್ನು ಉಲ್ಲೇಖಿಸಿ, ರಕ್ಷಿತ್ ಕೆ.ಜೆ ಕಡಬ ‘ನಮ್ಮ ಮಾತೃ ಭಾಷೆ ತುಳುವಿನ ಬಗ್ಗೆ ಬರೆದಿದ್ದು ಸಂತಸವೇ ಮಾನ್ಯ ಮುಖ್ಯಮಂತ್ರಿಗಳೇ.. ಆದರೆ ಅದು ಬರೀ ಬರಹದಲ್ಲಿ ಇರದೇ, ನಮ್ಮ ಮಾತೃಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಮಾಡಿ. ಇದು ನಮ್ಮ ಇಂದಿನ ಬೇಡಿಕೆ ಅಲ್ಲ ಹಲವಾರು ವರ್ಷಗಳದ್ದು ನಿಮ್ಮ ಅವಧಿಯಲ್ಲಾದರೂ ಆಗಲಿ’ ಎಂದು ಬರೆದುಕೊಂಡಿದ್ದಾರೆ.
ಅಕ್ರಮ ಮರಳುಗಾರಿಕೆ, ಅಕ್ರಮ ಗಣಿಗಾರಿಕೆ(ಕೆಂಪು ಕಲ್ಲು). ಎತ್ತಿನಹೊಳೆ ಮುಂತಾದ ಯೋಜನೆಗಳು ತುಳುನಾಡಿನ ಒಡಲಲನ್ನು ಬರಿದಾಗಿಸಿ ಬಿಟ್ಟಿದೆ ಆದರೂ, ತುಳುನಾಡಿನ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ‘ಬಲೇ ತುಳು ಪಾತೆರ್ಗ’ ಖಾತೆಯ ಮೂಲಕ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.