ಸಮಗ್ರ ಸಮಾಚಾರ: 15 ತಿಂಗಳ ಮಗು ಮೌರ್ಯ ಚಿಕಿತ್ಸೆಗೆ ನೆರವಾಗುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯಗೆ ಮಗುವಿನ ತಂದೆ ಮಲ್ಲಿಕಾರ್ಜುನ್ ಧನ್ಯವಾದ ಸಲ್ಲಿಸಿದ್ದಾರೆ. ಸೂಕ್ತ ಚಿಕಿತ್ಸೆ ಕೊಡಿಸಲು ಸಹಾಯ ಕೋರಿ ಸಿಎಂ ಸಿದ್ದರಾಮಯ್ಯಗೆ ಮಗುವಿನ ತಂದೆ ಮಲ್ಲಿಕಾರ್ಜುನ್ ಈ ಮೊದಲು ಪತ್ರ ಬರೆದಿದ್ದರು. ಇದೀಗ ತಂದೆ ಮಲ್ಲಿಕಾರ್ಜುನ್ ಮನವಿ ಬಳಿಕ ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಅವರು ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
ಈ ವಿಷಯವಾಗಿ X ಮಾಡಿರುವ ಮಗುವಿನ ತಂದೆ ಮಲ್ಲಿಕಾರ್ಜುನ್, ನಿಮ್ಮ ಆಶೀರ್ವಾದದಿಂದ ಆದಷ್ಟು ಬೇಗ ಲಸಿಕೆ ಸಿಗುವ ವಿಶ್ವಾಸವಿದೆ. ನನ್ನ ಬಗ್ಗೆ ತೋರಿಸದ ಕಾಳಜಿಗೆ, ತಮಗೆ ಮನದಾಳದ ಧನ್ಯವಾದಗಳು. ನಿಮ್ಮ ಆಶೀರ್ವಾದದಿಂದ ನನಗೆ ಬೇಗ ಲಸಿಕೆ ಸಿಗಲಿ ಎಂದು ಪ್ರಾರ್ಥಿಸುವೆ. ಈ ಫಂಡ್ ರೈಸಿಂಗ್ ಲಿಂಕ್ ಅಲ್ಲಿ ಸಹಾಯ ಮಾಡುವಂತೆ ಎಲ್ಲ ಕನ್ನಡಿಗರಲ್ಲಿ ವಿನಂತಿ ಮಾಡಿದ್ದಾರೆ.
ಆ ಮಗು ಸ್ಪೈನಲ್ ಮಸ್ಕ್ಯುಲರ್ ಅಟ್ರೋಪಿ’ ಕಾಯಿಲೆಯಿಂದ ಬಳಲುತ್ತಿರುವ ಹದಿನೈದು ತಿಂಗಳ ಹಸುಗೂಸು ಮೌರ್ಯ ಮೂಲತಃ ಗದಗ ಜಿಲ್ಲೆಯವರಾಗಿದ್ದು, ಬೆಂಗಳೂರಿನ ಮಾರತ್ಹಳ್ಳಿಯಲ್ಲಿ ವಾಸವಿದ್ದಾರೆ. ಹುಟ್ಟಿದಾಗ ಎಲ್ಲರಂತೆ ಇದ್ದ ಪುಟಾಣಿ ಕಂದಮ್ಮ ಮೌರ್ಯ, ಅ.14ರಂದು ಮಗುವಿಗೆ ಕಾಯಿಲೆ ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಜನಿಸಿದ 2 ವರ್ಷದೊಳಗೆ ಇಂಜೆಕ್ಷನ್ ಕೊಡಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಸದ್ಯ ಮಗನ ಚಿಕಿತ್ಸೆಗಾಗಿ ದಂಪತಿ ಈವರೆಗೆ 60 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ. 8 ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಮನವಿ ಮಾಡಿದ್ದರು.
ಸದ್ಯ ಮಗುವಿನ ಚಿಕಿತ್ಸೆ ಸಂಬಂಧ ಪೋಷಕರು ನವದೆಹಲಿಗೆ ತೆರಳಿದ್ದಾರೆ. ಮಗುವಿನ ಕಾಯಿಲೆ ಗುಣಪಡಿಸಲು ಝೋಲ್ಗೆನ್ಸ್ಮ ಚುಚ್ಚುಮದ್ದು ಅಗತ್ಯವಿದೆ. ವಿದೇಶದಿಂದ ಚುಚ್ಚುಮದ್ದು ಆಮದು ಮಾಡಿಕೊಳ್ಳಲು 17.5 ಕೋಟಿ ರೂ. ಅಗತ್ಯವಿದೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರವು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಆಮದು ಸುಂಕದಿಂದ ವಿನಾಯಿತಿ ನೀಡುವ ಮೂಲಕ ಕಂದನ ಪ್ರಾಣ ಉಳಿಸಲು ವಿನಂತಿಸಿದ್ದಾರೆ.