ಸಮಗ್ರನ್ಯೂಸ್: ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣವನ್ನು ಕೇಂದ್ರ ಅಪರಾಧ ವಿಭಾಗ (CCB) ರಾಷ್ಟ್ರೀಯ ತನಿಖಾ ದಳ (NIA)ಗೆ ವರ್ಗಾವಣೆ ಮಾಡಿದೆ. ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಎಫ್ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಸುಹೇಲ್ ಅಹಮದ್, ಜಾಹೀದ್ ತಬ್ರೇಜ್, ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಮತ್ತು ಮಹಮ್ಮದ್ ಉಮರ್ ಬಂಧಿತ ಶಂಕಿತ ಉಗ್ರರು. ಸದ್ಯ ಎನ್ಐಎ ಅಧಿಕಾರಿಗಳು ಸಿಸಿಬಿ ಬಂಧಿಸಿದ್ದ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲಿದ್ದಾರೆ.
ಬೆಂಗಳೂರಿನಲ್ಲಿ ಸರಣಿ ವಿಧ್ವಂಸಕ ಕೃತ್ಯ ನಡೆಸಿ, ಭಾರಿ ಅನಾಹುತ ಎಸಗಲು ಐವರು ಶಂಕಿತ ಉಗ್ರರು ಗ್ರೈನೇಡ್ ಸೇರಿದಂತೆ ಸ್ಪೋಟಕ ವಸ್ತುಗಳನ್ನು ಸಂಗ್ರಹಿಸಿದ್ದರು. ಶಂಕಿತ ಉಗ್ರ ನಾಸೀರ್ ಜೈಲಿನಲ್ಲಿದ್ದುಕೊಂಡೆ ಈ ಐವರು ಶಂಕಿತ ಉಗ್ರರ ಬ್ರೈನ್ ವಾಶ್ ಮಾಡಿದ್ದನು.
ಆರೋಪಿಗಳು ಸುಲ್ತಾನ್ ಪಾಳ್ಯದ ಪ್ರಾರ್ಥನಾ ಸ್ಥಳ ಮತ್ತು ಆರ್.ಟಿ ನಗರದ ಕನಕ ಬಡಾವಣೆಯ ಸೈಯದ್ ಸುಹೇಲ್ ಬಾಡಿಗೆ ಮನೆಯಲ್ಲಿ ಸಭೆ ಸೇರಿ ಉಗ್ರ ಚಟುವಟಿಕೆ ಹಾಗೂ ಸ್ಫೋಟ ನಡೆಸುವುದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಚರ್ಚೆ ನಡೆಸಿದ್ದರು. ಈ ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ಕೇಂದ್ರ ಗುಪ್ತಚರ ಇಲಾಖೆ ಸಂಪರ್ಕಿಸಿದ್ದರು. ನಂತರ ಎರಡೂ ವಿಭಾಗದ ಸಿಬ್ಬಂದಿ ಇದೇ ವರ್ಷ ಜುಲೈ 19 ರಂದು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದರು
7 ನಾಡ ಪಿಸ್ತೂಲ್, 45 ಜೀವಂತ ಗುಂಡುಗಳು, ವಾಕಿಟಾಕಿಗಳು, 12 ಮೊಬೈಲ್, ಡ್ರಾಗರ್ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದರು. ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿ, ಅಪರಾಧದ ಒಳಸಂಚು, ಶಸ್ತ್ರಾಸ್ರ ಕಾಯ್ದೆ ಅಡಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲಿನಲ್ಲಿ ನಾಸೀರ್ ಪೋನ್ ಬಳಸ್ತಿದ್ದು ಪತ್ತೆಯಾಗಿತ್ತು. ಇನ್ನು ಐವರು ಶಂಕಿತರನ್ನು ಮಾನಿಟರ್ ಮಾಡುತ್ತಿದ್ದ ಶಂಕಿತ ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಶೋಧ ನಡೆಯುತ್ತಿದೆ. ಜೈಲಿನಲ್ಲಿರುವ ನಾಸೀರ್ ಸೇರಿ ಐವರನ್ನು ಕಸ್ಟಡಿಗೆ ಪಡೆಯಲು ಎನ್ಐಎ ಸಿದ್ದತೆ ನಡೆಸಿದೆ.