ಸಮಗ್ರ ನ್ಯೂಸ್: ವೃದ್ಧಾಪ್ಯದ ಕಾರಣಕ್ಕೆ ಸರಕಾರ ಒದಗಿಸುವ ಪಡಿತರವನ್ನು ಪಡೆದುಕೊಳ್ಳಲಾಗದ ವೃದ್ಧರ ಮನೆಗಳಿಗೆ ತೆರಳಿ ಪಡಿತರ ಒದಗಿಸುವ ಯೋಜನೆಯನ್ನು ರಾಜ್ಯ ಸರಕಾರ ಪ್ರಾಯೋಗಿಕವಾಗಿ ಆರಂಭಿಸಿದೆ. ಅನ್ನ ಸುವಿಧ ಎಂಬ ಹೆಸರಿನ ಯೋಜನೆಯನ್ನು ರಾಜ್ಯ ಸರಕಾರ ಆರಂಭಿಸುತ್ತಿದ್ದು, ಇದು ಕಾರ್ಡ್‍ನಲ್ಲಿ ಓರ್ವ ಸದಸ್ಯರಿರುವ ಹಿರಿಯರಿಗೆ ಪಡಿತರ ವಿತರಿಸುವ ಕೆಲಸವನ್ನು ಮಾಡುತ್ತಿದೆ.
ಇದಕ್ಕೂ ಮೊದಲು ಇಂತಹ ವೃದ್ಧರಿಗೆ ಓಟಿಪಿ ರಹಿತವಾಗಿ ಪಡಿತರ ಪಡೆಯಲು ಅವಕಾಶವನ್ನು ನೀಡಲಾಗುತ್ತಿದ್ದು, ಇತರ ವ್ಯಕ್ತಿಗಳ ಮೂಲಕ ಪಡಿತರವನ್ನು ಪಡೆದುಕೊಳ್ಳುತ್ತಿದ್ದರು. ಇದೀಗ ಪಡಿತರವನ್ನು ನೇರವಾಗಿ ಅವರ ಮನೆಗಳಿಗೆ ತಲುಪಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ. ರಾಜ್ಯದಲ್ಲಿ ಇದುವರೆಗೆ ಇಂತಹ 7 ಸಾವಿರ ವೃದ್ಧರನ್ನು ಗುರುತಿಸಲಾಗಿದ್ದು, ಇದೀಗ ಪ್ರಾಯೋಗಿಕವಾಗಿ 800 ಜನರಿಗೆ ಪಡಿತರವನ್ನು ವಿತರಿಸುವ ಕಾರ್ಯ ಮಾಡಲಾಗುತ್ತಿದೆ.
ಈ ಯೋಜನೆಗಾಗಿ ಅನ್ನ ಸುವಿಧ ಆ್ಯಪ್ ಅನ್ನು ಸಿದ್ದಪಡಿಸಲಾಗಿದೆ. ಇದರ ಮೂಲಕ ಆಹಾರ ನಿರೀಕ್ಷಕರು ಮತ್ತು ಪಡಿತರ ಅಂಗಡಿಯವರು ಲಾಗಿನ್ ಆಗುತ್ತಾರೆ. ಆ್ಯಪ್ ನಲ್ಲಿ ವೃದ್ಧರ ಪಟ್ಟಿ ಮತ್ತು ಅವರ ಪಡಿತರ ಮಾಹಿತಿಗಳು ದೊರಕುತ್ತವೆ. ಅವರಿಗೆ ಪಡಿತರ ವಿತರಿಸಿದ ನಂತರ ಅದರ ಪೋಟೋ ಸಹಿತ ಮಾಹಿತಿಯನ್ನು ಇಲ್ಲಿ ತುಂಬಬೇಕು. ಹೀಗೆ ಪಡಿತರವನ್ನು ಅವರ ಮನೆಗೆ ತಲುಪಿಸಲಾಗುತ್ತದೆ. ಇದೀಗ ಪ್ರಾಯೋಗಿಕವಾಗಿ ಈ ಯೋಜನೆ ಆರಂಭಗೊಂಡಿದ್ದು, ಮುಂದೆ ಶಾಶ್ವತ ಯೋಜನೆಯಾಗಿ ಬದಲಾಗಲಿದೆ.