ಸಮಗ್ರ ನ್ಯೂಸ್: ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಇಂದು ‘ರಾಷ್ಟ್ರೀಯ ಏಕತಾ ದಿನ’ ಎಂಬುದಾಗಿ ಆಚರಿಸಲಾಗುತ್ತಿದೆ. ಪಟೇಲ್ ಅವರ 148ನೇ ಜನ್ಮದಿನದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವರು ಪಟೇಲರಿಗೆ ನಮನ ಸಲ್ಲಿಸಿದ್ದಾರೆ. 1875ರಲ್ಲಿ ಗುಜರಾತ್‍ನಲ್ಲಿ ಜನಿಸಿದ ಪಟೇಲರು ವಕೀಲರಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಸ್ವತಂತ್ರ ಭಾರತದ ಮೊದಲ ಗೃಹಮಂತ್ರಿಯಾಗಿದ್ದುಕೊಂಡು ನೂರಾರು ರಾಜಪ್ರಭುತ್ವಗಳನ್ನು ಭಾರತದ ಒಕ್ಕೂಟದಲ್ಲಿ ಸೇರ್ಪಡಿಸಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ.
ಇಂದು ಗುಜರಾತ್‍ನ ಏಕತಾ ಪ್ರತಿಮೆ ಬಳಿ ಪುಷ್ಪ ನಮನ ಸಲ್ಲಿಸಿದ ಪ್ರಧಾನಿ ಮೋದಿ, ಪಟೇಲರ ದಾರ್ಶನಿಕ ರಾಜನೀತಿ ಮತ್ತು ಅಸಾಧಾರಣ ಸಮರ್ಪಣೆಯನ್ನು ನೆನಪಿಸಿಕೊಳ್ಳುತ್ತಾ ಅವರ ಅದಮ್ಯ ಮನೋಭಾವ, ದೂರದೃಷ್ಟಿಯ ರಾಜನೀತಿ ಮತ್ತು ಅವರು ನಮ್ಮ ರಾಷ್ಟ್ರದ ಭವಿಷ್ಯವನ್ನು ರೂಪಿಸಿದ ಸಮರ್ಪಣೆಯನ್ನು ನಾವು ನೆನಪಿಸಿಕೊಳ್ಳುತ್ತೇವೆ. ರಾಷ್ಟ್ರೀಯ ಏಕೀಕರಣಕ್ಕೆ ಅವರ ಬದ್ಧತೆ ನಮಗೆ ಮಾರ್ಗದರ್ಶನ ನೀಡತ್ತಲೇ ಇದೆ. ಅವರ ಸೇವೆ ನಾವು ಸದಾ ಋಣಿ ಎಂದು ಟ್ವೀಟ್ ಮಾಡಿದ್ದಾರೆ.
1875ರ ಅಕ್ಟೋಬರ್ 31 ರಂದು ಗುಜರಾತಿನ ಖೇಡ ಜಿಲ್ಲೆಯಲ್ಲಿ ಜನಿಸಿದ ಸರ್ದಾರ್ ಪಟೇಲರು ಚಿಕ್ಕವಯಸ್ಸಿನಿಂದಲೇ ನೇರ ನಡೆನುಡಿಗೆ ಹೆಸರಾಗಿದ್ದರು. ಖೇಡ ಜಿಲ್ಲೆಯಲ್ಲಿ ನಡೆದ ರೈತ ಆಂದೋಲನದ ಮೂಲಕ ಗಾಂಧೀಜಿಯ ಪರಿಚಯವಾಯಿತು. ಇದು ಮುಂದೆ ಪಟೇಲ್ ಅವರನ್ನು ಸ್ವಾತಂತ್ರ್ಯ ಸಂಗ್ರಾಮದ ಶಕ್ತಿಯಾಗಿ ಬೆಳೆಯಲು ಸಹಕಾರ ನೀಡಿತು. ದೇಶದ ಏಕತೆಯ ವಿಚಾರ ಬಂದಾಗ ಪಟೇಲರು ತೆಗೆದುಕೊಳ್ಳುತ್ತಿದ್ದ ದಿಟ್ಟ ನಿರ್ಧಾರಗಳು ಇಂದಿಗೂ ಪ್ರಸ್ತುತ.