ಸಮಗ್ರ ನ್ಯೂಸ್: ಹೃದಯಾಘಾತವಾಗಿದ್ದ ಮಹಿಳೆಯೋರ್ವರನ್ನು ಆಸ್ಪತ್ರೆಗೆ ತಂದಾಗ ಅವರು ಮೃತಪಟ್ಟಿದ್ದು, ಮೃತದೇಹವನ್ನು ಆಸ್ಪತ್ರೆಯಿಂದ ಹೊರತಂದಾಗ ಅವರ ಕೈಯಲ್ಲಿದ್ದ ಎರಡು ಚಿನ್ನದ ಬಳೆಗಳು ಕಾಣೆಯಾಗಿವೆ ಎಂದು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೃತ ಮಹಿಳೆಯ ಕಡೆಯ ಶಮಂತ್ ಎಂಬವರು ನೀಡಿದ ದೂರಿನಲ್ಲಿ ದಿನಾಂಕ 23-10-2023 ರಂದು ತಳವಾರದ ನಮ್ಮ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ನನ್ನ ಆಪ್ತ ಸ್ನೇಹಿತರಾದ ಶೇಖರ್ ಮತ್ತು ಅವರ ಹೆಂಡತಿ ಅನಿತ, ತಾಯಿ ಲಕ್ಷ್ಮಿದೇವಿ ಹಾಗೂ ಅವರ ಕುಟುಂಬದವರೊಂದಿಗೆ ನನ್ನ ಮನೆಗೆ ಬಂದಿರುತ್ತಾರೆ. ಮರುದಿನ ದಿನಾಂಕ 24-10-2023 ರಂದು ಬೆಳಿಗ್ಗೆ 06-00 ಗಂಟೆಯ ಸಮಯದಲ್ಲಿ ಲಕ್ಷ್ಮಿದೇವಿಯವರಿಗೆ ತೀವ್ರವಾಗಿ ಹೃದಯಾಘಾತವಾದ ಕಾರಣ ಶೇಖರ್ ರವರ ಕಾರಿನಲ್ಲಿ ನಾನು, ಅನಿತ, ಕೆಂಪರಾಜು ರವರು ತಳವಾರದಿಂದ ಮೂಡಿಗೆರೆ ಎಂ.ಜಿ.ಎಂ ಸರ್ಕಾರಿ ಆಸ್ಪತ್ರೆಗೆ ಸುಮಾರು 06-30 ಗಂಟೆ ಸಮಯಕ್ಕೆ ಕರೆದುಕೊಂಡು ಬಂದಿರುತ್ತೇವೆ. ನಂತರ ಆಸ್ವತ್ರೆಯ ಸಿಬ್ಬಂದಿಗಳು ತಕ್ಷಣ ಅವರನ್ನು ತುರ್ತು ಚಿಕಿತ್ಸಾ ವಿಭಾಗದ ರೂಮಿನ ಒಳಗೆ ತಪಾಸಣೆ ನಡೆಸಲು ಕರೆದುಕೊಂಡು ಹೋಗಿರುತ್ತಾರೆ, ತುರ್ತು ಚಿಕಿತ್ಸಾ ವಿಭಾಗದ ರೂಂಮಿನ ಒಳಗೆ ಕರೆದುಕೊಂಡು ಹೋಗುವಾಗ ಲಕ್ಷ್ಮಿ ದೇವಿಯವರ ಎರಡೂ ಕೈಗಳಲ್ಲಿ ತಲಾ ಎರಡರಂತೆ ಒಟ್ಟು ನಾಲ್ಕು ಚಿನ್ನದ ಬಳೆಗಳು ಧರಿಸಿದ್ದರು.
ಹಿಂದಿನ ದಿನ ನಮ್ಮ ಮನೆಯ ಕಾರ್ಯಕ್ರಮದಲ್ಲಿ ತೆಗೆದ ಪೊಟೊದಲ್ಲಿಯೂ ಸಹ ಲಕ್ಷ್ಮಿದೇವಿಯವರ ಎರಡೂ ಕೈಗಳಲ್ಲಿ ತಲಾ ಎರಡರಂತೆ ಒಟ್ಟು ನಾಲ್ಕು ಚಿನ್ನದ ಬಳೆಗಳು ಧರಿಸಿರುವುದು ಕಂಡು ಬಂದಿರುತ್ತದೆ. ಬೆಳಿಗ್ಗೆ 06-30 ಗಂಟೆಯ ಸಮಯದಲ್ಲಿ ನಾವುಗಳು ಬಂದಾಗ ಆಸ್ವತ್ರೆಯ ಸಿಬ್ಬಂದಿಗಳು ಲಕ್ಷ್ಮಿದೇವಿರವರನ್ನು ಚಿಕಿತ್ಸೆಗೆಂದು ತುರ್ತು ಚಿಕಿತ್ಸಾ ವಿಭಾಗಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ಅವರ ಎರಡು ಕೈಗಳಲ್ಲಿ ನಾಲ್ಕು ಬಳೆಗಳು ಇರುವುದನ್ನು ನಾವು ಗಮನಿಸಿರುತ್ತೇವೆ. ನಂತರ ವೈದ್ಯರು ಪರೀಕ್ಷಿಸಿ ಲಕ್ಷ್ಮಿದೇವಿಯವರು ಮೃತಪಟ್ಟಿರವುದಾಗಿ ತಿಳಿಸಿದ್ದು, ಮೃತದೇಹವನ್ನು ತುರ್ತು ಚಿಕಿತ್ಸಾ ವಿಭಾಗದಿಂದ ಹೊರಗಡೆ ತೆಗೆದುಕೊಂಡು ಬರುವ ಸಮಯದಲ್ಲಿ ಅನಿತ, ಕೆಂಪರಾಜು ಮತ್ತು ನಾನು ಮೃತದೇಹವನ್ನು ನೋಡಿದಾಗ ಲಕ್ಷ್ಮಿದೇವಿಯ ಎರಡು ಕೈಗಳಲ್ಲಿ ಒಂದೊಂದು ಬಳೆಗಳು ಮಾತ್ರ ಇರುವುದು ಕಂಡುಬಂದಿರುತ್ತದೆ. ಈ ಬಗ್ಗೆ ಲಕ್ಷ್ಮಿದೇವಿಯವರ ಸೊಸೆ ಅನಿತಾ ರವರು ಆಸ್ವತ್ರೆಯ ಸಿಬ್ಬಂದಿಗಳನ್ನು ವಿಚಾರ ಮಾಡಿದಾಗ ನಮಗೆ ಗೊತ್ತಿಲ್ಲವೆಂದು ತಿಳಿಸಿರುತ್ತಾರೆ.
ಆದ್ದರಿಂದ ಲಕ್ಷ್ಮಿದೇವಿಯವರ ಕೈಯಲ್ಲಿದ್ದ ನಾಲ್ಕು ಚಿನ್ನದ ಬಳೆಗಳಲ್ಲಿ ಎರಡು ಚಿನ್ನದ ಬಳೆಗಳನ್ನು ತುರ್ತು ಚಿಕಿತ್ಸಾ ವಿಭಾಗದ ಒಳಗೆ ಯಾರೋ ಕಳವು ಮಾಡಿರುವ ಬಗ್ಗೆ ಅನುಮಾನವಿರುತ್ತದೆ. ಸದರಿ ಎರಡು ಚಿನ್ನದ ಬಳೆಗಳು ಸುಮಾರು 35 ರಿಂದ 40 ಗ್ರಾಂ ತೂಕವಿರುವುದಾಗಿ ಲಕ್ಷ್ಮಿ ದೇವಿಯವರ ಮಗನಾದ ಶೇಖರ್ ರವರು ತಿಳಿಸಿರುತ್ತಾರೆ. ಅವುಗಳ ಒಟ್ಟು ಬೆಲೆ ಸುಮಾರು 2 ಲಕ್ಷ ರೂಪಾಯಿಗಳಾಗಿರುತ್ತದೆ. ಈ ಬಗ್ಗೆ ಕರ್ತವ್ಯದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಗಳನ್ನು ವಿಚಾರಣೆ ಮಾಡಿ, ಸಿ ಸಿ ಕ್ಯಾಮರ ವನ್ನು ಪರಿಶೀಲಿಸಿ, ಕಳುವಾದ ಚಿನ್ನದ ಬಳೆಗಳನ್ನು ಪತ್ತೆ ಮಾಡಿಕೊಡಬೇಕಾಗಿ ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿರುತ್ತಾರೆ.
ಮೂಡಿಗೆರೆ ಎಂ.ಜಿ.ಎಂ. ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ತಳವಾರ ಗ್ರಾಮದ ಶಮಂತ್ ಎಂಬುವವರು ಮೂಡಿಗೆರೆ ಠಾಣೆಗೆ ದೂರು ನೀಡಿದ್ದು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದಿದೆ.