ಸಮಗ್ರ ನ್ಯೂಸ್: ಕೇರಳದ ಎರ್ನಾಕುಲಂ ಕಲಮಸ್ಸೆರಿಯ ಕ್ರಿಶ್ಚಿಯನ್ ಗ್ರೂಪ್ ಕನ್ವೆನ್ಷನ್ ಕೇಂದ್ರದಲ್ಲಿ ಅನುಮಾನಸ್ಪದ ಸ್ಪೋಟವೊಂದು ಭಾನುವಾರ ಸಂಭವಿಸಿದೆ. ಘಟನೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಮತ್ತು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಅಗ್ನಿ ಆಕಸ್ಮಿಕ ದಳ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ವಿಡಿಯೋ ದೃಶ್ಯಗಳನ್ನು ಟೀವಿ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಘಟನಾ ಸ್ಥಳದಲ್ಲಿ ಸಾಕಷ್ಟು ಜನರು ಸೇರಿರುವುದು ಕಾಣಿಸುತ್ತಿದೆ. “ಸ್ಫೊಟ ನಡೆದ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ದಳವು ಸ್ಥಳದಲ್ಲಿದೆ” ಎಂದು ಕೇರಳ ಕೈಗಾರಿಕಾ ಸಚಿವ ಪಿ. ರಾಜೀವ್ ಹೇಳಿದ್ದಾರೆ. ಘಟನೆ ನಡೆದ ತಕ್ಷಣ “ಎಲ್ಲಾ ಆರೋಗ್ಯ ವೃತ್ತಿಪರರು ಕರ್ತವ್ಯಕ್ಕೆ ಮರಳಬೇಕು” ಎಂದು ಕೇರಳ ಆರೋಗ್ಯ ಸಚಿವರಾದ ವೀಣಾ ಜಾರ್ಜ್ ಸೂಚಿಸಿದ್ದಾರೆ.
ಗಾಯಾಳುಗಳನ್ನು ಕಲಮಸ್ಸೆರಿ ಮೆಡಿಕಲ್ ಕಾಲೇಜಿಗೆ ಸ್ಥಳಾಂತರ ಮಾಡಲಾಗಿದೆ. ಕ್ರೈಸ್ತರ ಯೆಹೋವನ ಸಾಕ್ಷಿ ಸಮಾವೇಶದ ವೇಳೆ ಈ ಸ್ಫೋಟಗಳು ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸ್ಫೋಟ ಸಂಭವಿಸಿದಾಗ ಸುಮಾರು 2,000 ಜನರು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿದ್ದಾರೆ ಎಂದು ವರದಿಯಾಗಿದೆ. ಇದು ಭಯೋತ್ಪಾದಕ ದಾಳಿ ಎಂದು ಪ್ರಾಥಮಿಕ ಮೌಲ್ಯಮಾಪನವು ಸೂಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.