ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ ಮುಲ್ಕಿ ಕುಬೆವೂರು ರೈಲು ಸೇತುವೆ ಬಳಿ ಹಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಮೃತದೇಹ ಪತ್ತೆಯಾದ ಬಗ್ಗೆ ಮೂಲ್ಕಿ ಠಾಣೆಯ ಪೊಲೀಸ್ ಸಿಬ್ಬಂದಿ ಮಹಜರು ನಡೆಸುವಾಗ ರೈಲೊಂದು ಧಾವಿಸಿ ಬಂದಿದ್ದು, ಸಿಬ್ಬಂದಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಮೂಲ್ಕಿ ರೈಲು ನಿಲ್ದಾಣದ ಸಿಬ್ಬಂದಿ ಕುಮಾರ್ ಅವರ ಪುತ್ರ ವಿಶ್ಲೇಷ್ (26) ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಕುರಿತು ಮಾಹಿತಿ ಪಡೆದ ಮೂಲ್ಕಿ ಠಾಣೆಯ ಎಎಸ್‌ಐ ಸಂಜೀವ, ಚಂದ್ರಶೇಖರ, ಶಂಕರ, ಬಸವರಾಜ್ ಘಟನಾ ಸ್ಥಳಕ್ಕೆ ಸೋಮವಾರ ಮುಂಜಾನೆ ತೆರಳಿದ್ದರು. ಅದೇ ವೇಳೆ ಹಠಾತ್ ಆಗಿ ರೈಲು ಸೇತುವೆಯತ್ತ ಧಾವಿಸಿತ್ತು. ರೈಲು ತಮ್ಮ ಮೇಲೆಯೇ ಹರಿಯುವ ಅಪಾಯವನ್ನು ಗಮನಿಸಿದ ಪೊಲೀಸರು ತಕ್ಷಣ ಹಳಿಯ ಪಕ್ಕಕ್ಕೆ ಜಿಗಿದು ಪಾರಾಗಿದ್ದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
‘ವಿದ್ಯುತ್ ಚಾಲಿತ ರೈಲು ಬಂದಾಗ ಹೆಚ್ಚು ಸದ್ದಾಗುವುದಿಲ್ಲ. ಹಾಗಾಗಿ ರೈಲು ನಮ್ಮ ಹತ್ತಿರಕ್ಕೆ ಬರುವವರೆಗೂ ತಿಳಿದಿರಲಿಲ್ಲ. ನಮ್ಮ ಜೀವ ಉಳಿದದ್ದು ಹೆಚ್ಚು’ ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದರು.
ಕೊಯಮತ್ತೂರಿನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದ ವಿಶ್ಲೇಷ್ ಸುರತ್ಕಲ್ ಎನ್‌ಐಟಿಕೆಯಲ್ಲಿ ಶಿಶಿಕ್ಷು ತರಬೇತಿ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.