ಸಮಗ್ರ ಸಮಾಚಾರ: ಅಮೃತಾ ಪ್ರೇಮ್ ಹಾಗೂ ನಾಗಭೂಷಣ್ ನಟನೆಯ ಟಗರು ಪಲ್ಯ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರವನ್ನು ನಟ ಧನಂಜಯ್ ನಿರ್ಮಿಸಿದ್ದು ಉಮೇಶ್ ಕೃಪ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಹಲವಾರು ಸಿನಿಮಾ ನಟ,ನಟಿಯರಿದ್ದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತರಕ ಕಾರ್ತಿಕ್ ಗೌಡ, ”45 ದಿನಗಳ ಮುನ್ನವೇ ಟಗರು ಪಲ್ಯ ಚಿತ್ರವನ್ನು ನನಗೆ ತೋರಿಸಿದ್ದರು. ಬಡವ ರಾಸ್ಕಲ್ ಕೂಡಾ ರಿಲೀಸ್‌ಗೆ ಮುನ್ನ 2-3 ತಿಂಗಳ ಮೊದಲೇ ತೋರಿಸಿದ್ದರು. ಟಗರು ಪಲ್ಯ ಎಲ್ಲರೂ ಮೆಚ್ಚುವಂತ ಸಿನಿಮಾ. ಸಂಪ್ರದಾಯ, ಕನ್ನಡ ಭಾಷೆ ಎಲ್ಲವನ್ನೂ ಈ ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ. ಪ್ರತಿ ಪಾತ್ರಧಾರಿಗಳು ಅದ್ಭುತವಾಗಿ ನಟಿಸಿದ್ದಾರೆ. ಮನರಂಜನೆ ಜೊತೆಗೆ ನಮ್ಮ ರಾಜ್ಯದ ಒಂದು ಭಾಗದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ನಾವು ಈ ವರ್ಷದಲ್ಲಿ ವಿತರಣೆ ಮಾಡುತ್ತಿರುವ ಬೆಸ್ಟ್ ಸಿನಿಮಾಗಳಲ್ಲಿ ಇದೂ ಒಂದು. ಟಗರು ಪಲ್ಯ, ಶುಕ್ರವಾರ ಒಟ್ಟು 175 ಥಿಯೇಟರ್‌ಗಳಲ್ಲಿ ರಿಲೀಸ್ ಆಗ್ತಿದೆ, ಸಿಎಂ ಕೂಡಾ ನೋಡಲು ಬರ್ತಿದ್ದಾರೆ” ಎಂದು ಮಾಹಿತಿ ನೀಡಿದರು.
ಟಗರು ಪಲ್ಯ’ ಚಿತ್ರವನ್ನು ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿ ಧನಂಜಯ್ ನಿರ್ಮಿಸಿದ್ದು ಉಮೇಶ್ ಕೃಪ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಮೂಲಕ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಅಮೃತಾ ತಂದೆ ಪಾತ್ರದಲ್ಲಿ ರಂಗಾಯಣ ರಘು, ತಾಯಿ ಪಾತ್ರದಲ್ಲಿ ತಾರಾ ಅನುರಾಧಾ ನಟಿಸಿದ್ದಾರೆ. ಟ್ರೇಲರ್ ನೋಡಿ ಸಿನಿಪ್ರಿಯರು ಮೆಚ್ಚಿದ್ದು ಸಿನಿಮಾ ನೋಡಲು ಕಾಯುತ್ತಿದ್ದಾರೆ. ಅಕ್ಟೋಬರ್ 27 ಅಂದರೆ ಇಂದು ಸಿನಿಮಾ ತೆರೆ ಕಾಣುತ್ತಿದೆ. ಇಕ್ಕಟ್ ಖ್ಯಾತಿಯ ನಾಗಭೂಷಣ್, ಮೈಸೂರು ಆರ್ಕೆಸ್ಟ್ರಾ ಖ್ಯಾತಿಯ ಪೂರ್ಣಚಂದ್ರ, ಹಿರಿಯ ನಟ ವೈಜನಾಥ್ ಬಿರಾದಾರ್, ಚಿತ್ರಾ ಶೆಣೈ, ಶ್ರೀನಾಥ್ ವಸಿಷ್ಠ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತ ನೀಡಿದ್ದು ಅವರೂ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ.