ಸಮಗ್ರ ವಿಶೇಷ: ಶರನ್ನವರಾತ್ರಿಯ ಸಪ್ತಮಿ ತಿಥಿಯ ದಿನದಂದು ಮಾತಾ ದುರ್ಗೆಯ ಅತ್ಯಂತ ಶಕ್ತಿಶಾಲಿ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ಮಾತಾ ಕಾಳರಾತ್ರಿ ಪೂಜೆ ಮತ್ತು ಮಂತ್ರಗಳನ್ನು ಪಠಿಸುವುದರಿಂದ ಎಲ್ಲಾ ರೀತಿಯ ಕಷ್ಟ, ನೋವುಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
ಮಾತಾ ಕಾಳರಾತ್ರಿಯನ್ನು ಎಲ್ಲಾ ಸಿದ್ಧಿಗಳ ದೇವತೆ ಎಂದೂ ಕರೆಯಲಾಗುತ್ತದೆ. ಆದ್ದರಿಂದ ಈ ದಿನ ತಾಯಿಯನ್ನು ತಂತ್ರ-ಮಂತ್ರದಿಂದ ಪೂಜಿಸಲಾಗುತ್ತದೆ. ಈಕೆಯನ್ನೇ ದಕ್ಷಿಣ ಭಾರತದಲ್ಲಿ ಸರಸ್ವತಿ ದೇವಿ ಎಂದು ಪೂಜಿಸಲಾಗುತ್ತದೆ.
ಮಾತಾ ಕಾಳರಾತ್ರಿ ಯ ಮಂತ್ರಗಳನ್ನು ಪಠಿಸುವುದರಿಂದ ಭೂತದೆವ್ವ, ನಕಾರಾತ್ಮಕ ಶಕ್ತಿಗಳು ಸೇರಿದಂತೆ ಎಲ್ಲ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ. ದುಷ್ಟ ಶಕ್ತಿಗಳು ಮನೆಯಿಂದ ಓಡಿಹೋಗುತ್ತವೆ ಎಂದು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಆಕೆ ಒಲಿದರೆ ಭಯ ಹೋಗಿ ಧೈರ್ಯ ಮೈಗೂಡುತ್ತದೆ, ಅಕಾಲ ಮೃತ್ಯುವಿರುವುದಿಲ್ಲ, ಜೊತೆಗೆ ಶತ್ರುಗಳಿಂದ ಮುಕ್ತಿ ದೊರೆಯುತ್ತದೆ. ಮಾತಾ ಕಾಳರಾತ್ರಿಯ ಸ್ವರೂಪ, ಪೂಜಾ ವಿಧಾನ ಮತ್ತು ಮಂತ್ರವನ್ನು ತಿಳಿಯೋಣ.
ಮಾತಾ ಕಾಳರಾತ್ರಿಯ ರೂಪ
ಶುಂಭ ನಿಶುಂಭರೆಂಬ ರಾಕ್ಷಸರನ್ನು ಸಂಹಾರ ಮಾಡಲು ತಾಯಿ ಪಾರ್ವತಿಯು ತನ್ನ ಚಿನ್ನದ ಬಣ್ಣದ ಚರ್ಮ ತೆಗೆದು ಕಪ್ಪು ಬಣ್ಣದ ತೊಗಲನ್ನು ಹೊದ್ದು ಬರುತ್ತಾಳೆ. ಅವಳೇ ಕಾಳರಾತ್ರಿ. ಅವಳು ಪಾರ್ವತಿಯ ಅತ್ಯಂತ ಭೀಕರ ರೂಪವಾಗಿದ್ದಾಳೆ. ಮಾತಾ ಕಾಳರಾತ್ರಿಗೆ ಮೂರು ಕಣ್ಣುಗಳು ಮತ್ತು ನಾಲ್ಕು ತೋಳುಗಳಿವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಪ್ರತಿ ಕೈಯ್ಯಲ್ಲಿಯೂ ತಾಯಿಯು ವರದ ಮುದ್ರೆ, ಅಭಯಮುದ್ರೆ, ಕಬ್ಬಿಣದ ಲೋಹದಿಂದ ಮಾಡಿದ ಸಲಾಕೆ, ಖಡ್ಗವನ್ನು ಹಿಡಿದಿದ್ದಾಳೆ.
ಮಾತಾ ಕಾಳರಾತ್ರಿ ಪೂಜಾ ವಿಧಿ
ನವರಾತ್ರಿ ಮಹಾಪರ್ವದ ಸಪ್ತಮಿ ತಿಥಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ಧ್ಯಾನ ಮಾಡಿ ಪೂಜಾ ಸ್ಥಳವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದರ ನಂತರ ಪೂಜಾ ಸ್ಥಳವನ್ನು ಗಂಗಾಜಲದಿಂದ ತೇವಗೊಳಿಸಿ. ನಂತರ ತಾಯಿಗೆ ಹೂವು, ಸಿಂಧೂರ, ಕುಂಕುಮ, ಅಕ್ಷತೆ ಇತ್ಯಾದಿಗಳನ್ನು ಅರ್ಪಿಸಿ. ಮಾತಾ ಕಾಳರಾತ್ರಿಗೆ ನಿಂಬೆಹಣ್ಣಿನಿಂದ ಮಾಡಿದ ಮಾಲೆಯನ್ನು ಅರ್ಪಿಸಿ ಮತ್ತು ಬೆಲ್ಲದಿಂದ ಮಾಡಿದ ಭಕ್ಷ್ಯವನ್ನು ಅರ್ಪಿಸಿ. ಬೆಲ್ಲದ ಭಕ್ಷ್ಯಗಳು ಆಕೆಗೆ ಬಹಳ ಪ್ರಿಯವಾಗಿವೆ. ಇದರ ನಂತರ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಮಂತ್ರಗಳನ್ನು ಪಠಿಸಿ. ಕಾಳರಾತ್ರಿಯ ಪೂಜೆಯಲ್ಲಿ ಆಕೆಗೆ ಶೃಂಗಾರ ಸಾಮಗ್ರಿಗಳನ್ನು ಅರ್ಪಿಸುವುದನ್ನು ಮರೆಯಬೇಡಿ. ನಂತರ ಮಾ ಕಾಳರಾತ್ರಿಯ ಭಜನೆ ಮಾಡಿ. ಭಜನೆಗೆ ಮೊದಲು ದುರ್ಗಾ ಚಾಲೀಸಾ ಮತ್ತು ದುರ್ಗಾ ಸಪ್ತಶತಿಯನ್ನು ಪಠಿಸಿ. ಆರತಿಯ ನಂತರ, ಅಜಾಗರೂಕತೆಯಿಂದ ಮಾಡಿದ ತಪ್ಪುಗಳನ್ನು ಕ್ಷಮಿಸುವಂತೆ ತಾಯಿಯನ್ನು ಪ್ರಾರ್ಥಿಸಿದರೆ ತಾಯಿ ಕಾಪಾಡುತ್ತಾಳೆ.
ಪುರಾಣದ ಪ್ರಕಾರ, ರಾಕ್ಷಸರಾದ ಶುಂಭ-ನಿಶುಂಭ ಮತ್ತು ರಕ್ತಬೀಜಾಸುರರು ಮೂರು ಲೋಕಗಳಲ್ಲಿ ತಮ್ಮ ಭಯವನ್ನು ಸೃಷ್ಟಿಸಲು ಮುಂದಾದರು. ಇದರಿಂದ ಆತಂಕಗೊಂಡ ದೇವತೆಗಳೆಲ್ಲ ಶಿವನ ಮೊರೆ ಹೋದರು. ರಾಕ್ಷಸರನ್ನು ಸಂಹರಿಸಿ ತನ್ನ ಭಕ್ತರನ್ನು ರಕ್ಷಿಸುವಂತೆ ಶಿವನು ಪಾರ್ವತಿಯನ್ನು ಕೇಳಿದನು. ಶಿವನ ಸಲಹೆಯಂತೆ ಪಾರ್ವತಿಯು ದುರ್ಗೆಯ ರೂಪವನ್ನು ತೆಗೆದುಕೊಂಡು ಶುಂಭ-ನಿಶುಂಭರನ್ನು ಕೊಂದಳು. ಆದರೆ ದುರ್ಗಾ ದೇವಿಯು ರಕ್ತಬೀಜಾಸುರನನ್ನು ಕೊಂದ ತಕ್ಷಣ ಆತನ ದೇಹದಿಂದ ಹೊರಬಂದ ರಕ್ತದಿಂದ ಲಕ್ಷಗಟ್ಟಲೆ ರಕ್ತಬೀಜಾಸುರರು ಉತ್ಪತ್ತಿಯಾದರು. ಇದನ್ನು ನೋಡಿದ ದುರ್ಗಾ ಮಾತೆಯು ತನ್ನ ತೇಜಸ್ಸಿನಿಂದ ಕಾಳರಾತ್ರಿಯನ್ನು ರಚಿಸಿದಳು. ಇದಾದ ನಂತರ ದುರ್ಗಾ ದೇವಿಯು ರಕ್ತಬೀಜಾಸುರರನ್ನು ಕೊಂದಾಗ ಕಾಳರಾತ್ರಿಯು ಆತನ ದೇಹದಿಂದ ಹೊರಬರುತ್ತಿದ್ದ ರಕ್ತವನ್ನು ತನ್ನ ಬಾಯಿಯಲ್ಲಿ ತುಂಬಿಕೊಂಡು ರಕ್ತಬೀಜಾಸುರನನ್ನು ಸೀಳಿ ಕೊಂದಳು.