ಸಮಗ್ರ ನ್ಯೂಸ್: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ ಮತ್ತು ಕದಿರು ಕಟ್ಟುವ ಕಾರ್ಯ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಸುಬ್ರಹ್ಮಣ್ಯ ದೇವರ ಮೂಲ ವಿಗ್ರಹಕ್ಕೆ ಪಂಚಾಮೃತಾಭಿಷೇಕ ನೆರವೇರಿಸಿದರು.
ಅಭಿಷೇಕದ ಬಳಿಕ ತೆನೆ ತರಲು ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ದರ್ಪಣತೀರ್ಥ ನದಿ ತೀರಕ್ಕೆ ತೆರಳಿದರು. ನದಿ ತಟದಲ್ಲಿ ಭತ್ತದ ತೆನೆಗೆ ಅರ್ಚಕರು ಪೂಜೆ ನೆರವೇರಿಸಿದರು. ಬತ್ತದ ತೆನೆಯನ್ನು ದೀವಟಿಗೆ, ಬ್ಯಾಂಡ್, ವಾದ್ಯದ ನಿನಾದದೊಂದಿಗೆ, ಆನೆ, ಬಿರುದಾವಳಿಗಳ ಮೂಲಕ ಮಂತ್ರಘೋಷದೊಂದಿಗೆ ಮೆರವಣಿಗೆಯಲ್ಲಿ ದೇವಳಕ್ಕೆ ತರಲಾಯಿತು. ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ಬಂದು ಅರ್ಚಕರು ತೆನೆಯನ್ನು ಗರ್ಭಗುಡಿಗೆ ಕೊಂಡೊಯ್ದರು. ದೇವರ ಸನ್ನಿಧಿಯಲ್ಲಿ ಕದಿರು ಪೂಜೆ ನೆರವೇರಿಸಿ, ಗರ್ಭಗುಡಿಗೆ ಕದಿರು ಕಟ್ಟಿದರು.
ದೇವಸ್ಥಾನದ ಪರಿವಾರ ಗುಡಿಗಳಿಗೆ, ದೇವಳದ ವಿವಿಧ ಭಾಗಗಳಿಗೆ, ರಥಗಳಿಗೆ, ಕಚೇರಿಗೆ ಕದಿರು ಕಟ್ಟಲು ತೆನೆ ವಿತರಿಸಲಾಯಿತು. ಭಕ್ತರಿಗೂ ಕದಿರು ವಿತರಿಸಲಾಯಿತು. ಹೊಸ್ತಾರೋಗಣೆಯ ಪ್ರಯುಕ್ತ ದೇವರಿಗೆ ಗರ್ಭಗುಡಿಯ ಎದುರಿನ ಮಂಟಪದಲ್ಲಿ ಪಂಚಾಮೃತ ಮಹಾಭಿಷೇಕ, ವಿಶೇಷ ಪೂಜೆ ಹಾಗೂ ನವಾನ್ನ ನೈವೇಧ್ಯ ಸರ್ಮಪಿಸಲಾಯಿತು. ದೇವಳದಲ್ಲಿ ಮೂರು ತೆಂಗಿನ ಕಾಯಿ ಗಣಪತಿ ಹೋಮ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ.ಎಸ್.ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಮನೋಹರ ರೈ, ಲೋಕೇಶ್ ಮುಂಡುಕಜೆ, ಶೋಭಾ ಗಿರಿಧರ್, ವನಜಾ.ವಿ.ಭಟ್ ಇದ್ದರು. ಮೆರವಣಿಗೆಯಲ್ಲಿ ದೇವಳಕ್ಕೆ ಕದಿರನ್ನು ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಹೊತ್ತು ತಂದರು