ಸಮಗ್ರ ನ್ಯೂಸ್: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ತನಿಖೆಯಿಂದ ಉಗ್ರಗಾಮಿ ಸಂಘಟನೆಯ ಸಂಚುಕೋರರ ಒಂದೊಂದೇ ಭಯಾನಕ ಪ್ಲಾನ್‌ಗಳು ಹೊರಬೀಳುತ್ತಿದ್ದು, ಉಡುಪಿಯ ಶ್ರೀ ಕೃಷ್ಣ ಮಠವು ಕೂಡ ಶಂಕಿತ ಉಗ್ರರ ಟಾರ್ಗೆಟ್ ಆಗಿತ್ತು ಎನ್ನುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.
ಕುಕ್ಕರ್ ಬಾಂಬ್ ಸ್ಫೋಟದ ಪ್ರಕರಣದ ಸಂಚು ರೂಪಿಸಿದ್ದ ಉಗ್ರಗಾಮಿ ಸಂಘಟನೆಯ ಸಂಚುಕೋರ, ಶಿವಮೊಗ್ಗ ಮೂಲದ ಅರಾಫತ್ ಅಲಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಕರ್ನಾಟಕದಲ್ಲಿ ಮೂರು ಸ್ಥಳಗಳಲ್ಲಿ ಬಾಂಬ್ ಬ್ಲಾಸ್ಟ್ ಮಾಡಲು ಸಂಚು ರೂಪಿಸಲಾಗಿತ್ತು ಎನ್ನುವ ಅಂಶ ಹೊರಬಿದ್ದಿದೆ.
ಮಂಗಳೂರಿನ ಕದ್ರಿ ದೇವಸ್ಥಾನ, ಉಡುಪಿ ಶ್ರೀಕೃಷ್ಣ ಮಠ, ಜೊತೆಗೆ ಚಿಕ್ಕಮಗಳೂರಿನ ಬಿಜೆಪಿ ಕಚೇರಿಯನ್ನೂ ಕೂಡ ಟಾರ್ಗೆಟ್ ಮಾಡಲಾಗಿತ್ತು ಎಂದು ಅರಾಫತ್ ಅಲಿ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ.
ಮಂಗಳೂರಿನ ಕದ್ರಿ ಬ್ಲಾಸ್ಟ್ ಯಶಸ್ವಿಯಾದರೆ ಉಡುಪಿ ಮಠ ಹಾಗೂ ಚಿಕ್ಕಮಗಳೂರು ಬಿಜೆಪಿ ಕಚೇರಿಯನ್ನು ಬ್ಲಾಸ್ಟ್ ಮಾಡಲು ಶಂಕಿತ ಉಗ್ರರರು ಸಂಚು ರೂಪಿಸಿದ್ದರು. ಆದರೆ ಕದ್ರಿ ದೇವಸ್ಥಾನ ತಲುಪುವ ಮುನ್ನವೇ ಕುಕ್ಕರ್ ಬಾಂಬ್ ಸ್ಟೋಟಗೊಂಡು ಆರೋಪಿ ಪೊಲೀಸರ ಕೈಗೆ ಸಿಕ್ಕಿದ್ದ. ಹೀಗಾಗಿ ಉಡುಪಿ ಕೃಷ್ಣ ಮಠ ಹಾಗೂ ಚಿಕ್ಕಮಗಳೂರು ಬಿಜೆಪಿ ಕಚೇರಿ ಬ್ಲಾಸ್ಟ್ ಯೋಜನೆ ವಿಫಲಗೊಂಡಿದೆ.