ಸಮಗ್ರ ನ್ಯೂಸ್: ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನ ಮುಂದುವರೆದಿದ್ದು, ಇದೀಗ ಅಮೆರಿಕಾ ಅಧ್ಯಕ್ಷ ಜೋ ಬಿಡೆನ್ ನಾಳೆ ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ.
ಯುದ್ಧದ ಆರಂಭದ ದಿನದಿಂದಲೂ ಇಸ್ರೇಲ್ ಗೆ ಸಹಾಯಹಸ್ತವನ್ನು ಚಾಚುತ್ತ ಬಂದಿರುವ ಅಮೇರಿಕಾ, ಇದೀಗ ಗಾಜಾ ಪ್ರದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಯುಎಸ್ ಅಧ್ಯಕ್ಷ ಜೋ ಬಿಡೆನ್ ಬುಧವಾರ ಇಸ್ರೇಲ್‌ಗೆ ಭೇಟಿ ನೀಡುತ್ತಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ವ ಪಡೆದುಕೊಂಡಿದೆ.
ಹಮಾಸ್ ಸೇರಿದಂತೆ ಇತರೆ ಭಯೋತ್ಪಾದಕರಿಂದ ತನ್ನ ಜನರನ್ನು ರಕ್ಷಿಸಲು ಮತ್ತು ಭವಿಷ್ಯದ ದಾಳಿಯನ್ನು ತಡೆಯಲು ಇಸ್ರೇಲ್ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದು, ಇದು ಅಮೇರಿಕಾದ ನಿಲುವನ್ನು ಗಟ್ಟಿಗೊಳಿಸಿದೆ.
ಇಸ್ರೇಲ್ ಹಾಗೂ ಹಮಾಸ್ ನಡುವಿನ ಭೀಕರ ಯುದ್ಧದಲ್ಲಿ 4000 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 1,400 ಮಂದಿ ಇಸ್ರೇಲ್‌ನವರಾದರೆ, 2,750 ಮಂದಿ ಪ್ಯಾಲೆಸ್ಟಿನ್‌ಗೆ ಸೇರಿದವರಾಗಿದ್ದಾರೆ.