ಸಮಗ್ರ ನ್ಯೂಸ್: ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ತಯಾರಾದ 20 ಅಡಿ ಉದ್ದದ ಲೇಖನಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಸಿಕ್ಕಿದೆ.
ಸಾಗರದ ಆವಿನಹಳ್ಳಿಯ ಗಣೇಶ್ ಹಾರ್ಡ್‌ವೇರ್ ಮತ್ತು ಜೈಗಣೇಶ್ ವುಡ್‌ವರ್ಕ್ ಮಾಲೀಕ, ಕುಶಲಕರ್ಮಿಯೂ ಆಗಿರುವ ಕೃಷ್ಣಮೂರ್ತಿ ಆಚಾರ್ ಹತ್ತು ವರ್ಷಗಳ ಹಿಂದೆ ಪೆನ್ ತಯಾರಿಸಿದ ಈ ಲೇಖನಿಗೆ ನವದೆಹಲಿಯಲ್ಲಿ ಶನಿವಾರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ದಾಖಲಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೃಷ್ಣಮೂರ್ತಿ ಆಚಾರ್ ವಿಶ್ವಕರ್ಮಸ್ ಎಂಬ ಹೆಸರಿನಲ್ಲಿ ಈ ಬೃಹತ್ ಲೇಖನಿಯನ್ನು ಹೈಬ್ರಿಡ್ ಅಕೇಶಿಯಾ ಕಟ್ಟಿಗೆಯನ್ನು ಉಪಯೋಗಿಸಿ ಸುಮಾರು 15 ದಿನಗಳ ನಿರಂತರ ಶ್ರಮದಿಂದ ಸಿದ್ಧಪಡಿಸಿದ್ದಾರೆ.
ಈ ವಿಶೇಷವಾದ ಪೆನ್ನನ್ನು ಗಿನ್ನೆಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ಗೆ ಕಳಿಸಲಾಗಿತ್ತು. ಇದೀಗ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಪೆನ್‌ಗೆ ಸ್ಥಾನ ಸಿಕ್ಕಿದೆ. ಈ ಲೇಖನಿಯನ್ನು ಸಾಹಿತ್ಯ ಸಮ್ಮೇಳನ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.