ಸಮಗ್ರ ನ್ಯೂಸ್: ದೇಶಾದ್ಯಂತ ತೀವ್ರ ವಿವಾದ, ಚರ್ಚೆಗೆ ಗ್ರಾಸವಾಗಿರುವ ಚುನಾವಣಾ ಬಾಂಡ್ ಪ್ರಕರಣಗಳ ವಿಚಾರಣೆಯನ್ನು,
ಪಂಚ ರಾಜ್ಯಗಳಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಮೊದಲೇ ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ (Constitution Bench) ವರ್ಗಾಯಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ 31ರಂದು ನಡೆಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ಚುನಾವಣಾ ಬಾಂಡ್ ಯೋಜನೆಯನ್ನು 2017ರಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಹಣಕಾಸು ಕಾಯ್ದೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗಳಿಗೆ ತಿದ್ದುಪಡಿ ತಂದು 2018ರ ಜನವರಿಯಲ್ಲಿ ಚುನಾವಣಾ ಬಾಂಡ್ ಯೋಜನೆ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು. ಹೀಗೆ ಮೂಲಕ ಚುನಾವಣಾ ಬಾಂಡ್ ಯೋಜನೆ ಜಾರಿಗೊಳಿಸಲಾಯಿತು.
ಚುನಾವಣಾ ಬಾಂಡ್ ಯೋಜನೆ ಅಡಿಯಲ್ಲಿ ಭಾರತದ ನಾಗರಿಕ ಅಥವಾ ಭಾರತದಲ್ಲಿ ನೋಂದಣಿಯಾದ ಕಂಪನಿಯು ಯಾವುದೇ ರಾಜಕೀಯ ಪಕ್ಷಕ್ಕೆ ಚುನಾವಣೆ ಬಾಂಡ್‌ಗಳನ್ನು ಖರೀದಿಸುವ ಮೂಲಕ ದೇಣಿಗೆ ನೀಡಬಹುದಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್‌ನ (SBI) ಆಯ್ದ ಶಾಖೆಗಳಲ್ಲಿ 1 ಸಾವಿರ, 10 ಸಾವಿರ, ಲಕ್ಷ, 10 ಲಕ್ಷ ಹಾಗೂ 1 ಕೋಟಿ ರೂ.ವರೆಗೆ ಚುನಾವಣೆ ಬಾಂಡ್ ಖರೀದಿಸಿ ದೇಣಿಗೆ ನೀಡಬಹುದಾಗಿದೆ. ಇಲ್ಲಿ ದೇಣಿಗೆ ನೀಡಿದವರ ಕುರಿತು ಯಾವುದೇ ಮಾಹಿತಿ ಬಹಿರಂಗವಾಗುವುದಿಲ್ಲ. ಹಾಗೆಯೇ, ಇಷ್ಟು ಮೊತ್ತದ ದೇಣಿಗೆಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಬಹುದಾದ ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು. ಅಕ್ಟೋಬರ್ 10ರಂದು ಅರ್ಜಿಗಳನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಅಕ್ಟೋಬರ್ 31 ಹಾಗೂ ನವೆಂಬರ್ 1ರಂದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತ್ತು. ಆದರೆ ಈಗ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ನ್ಯಾಯಪೀಠವು, ಸಾಂವಿಧಾನಿಕ ಪೀಠಕ್ಕೆ ಅರ್ಜಿಗಳನ್ನು ವರ್ಗಾಯಿಸಿದೆ.