ಸಮಗ್ರ ವಿಶೇಷ: ನವರಾತ್ರಿಯ ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ.
ಪೂರ್ವಜನ್ಮದಲ್ಲಿ ನಾರದರ ಉಪದೇಶದಿಂದ ಶಿವನನ್ನೇ ಪತಿಯನ್ನಾಗಿ ಪಡೆಯಲು ಘೋರ ತಪಸ್ಸನ್ನು ಮಾಡುತ್ತಾಳೆ. ಆದ್ದರಿಂದಲೇ ಈಕೆಗೆ ಬ್ರಹ್ಮಚಾರಿ ಎಂಬ ಹೆಸರು ಬರುತ್ತದೆ. ಈ ಹಂತದಲ್ಲಿ ಕೇವಲ ಹಣ್ಣನ್ನು ತಿಂದು ಜೀವನ ನಡೆಸುತ್ತಿರುತ್ತಾಳೆ. ಮಳೆ ಬಿಸಿಲು ಎಂದರೆ ಅತಿ ಕಷ್ಟದ ದಿನಗಳಿಂದ ಗೆಲುವನ್ನು ಸಾಧಿಸಿದಳು ಎಂಬುದೊಂದು ಕಥೆ ಇದೆ. ಕೆಲವು ಪುರಾಣ ಗ್ರಂಥಗಳಲ್ಲಿ ಮರದಿಂದ ಬಿದ್ದಿದ್ದ ಬಿಲ್ವಪತ್ರೆಯ ಎಲೆಗಳನ್ನು ತಿಂದು ಬದುಕಿದಳೆಂದು ತಿಳಿದು ಬರುತ್ತದೆ.
ಒಟ್ಟಾರೆ ಈಕೆಯ ಮುಖ್ಯ ಗುರಿ ಭಗವಾನ್ ಶಂಕರನ ಜೊತೆ ವಿವಾಹ. ಹಗಲು ರಾತ್ರಿ ಎನ್ನದೆ ಅತಿ ಕಷ್ಟದಿಂದ ಭಗವಾನ್ ಶಂಕರರ ಆರಾಧನೆಯನ್ನು ಮಾಡುತ್ತಾಳೆ. ಸಾವಿರಾರು ವರ್ಷಗಳು ಕಳೆದರೂ ತಪಸ್ಸನ್ನು ನಿಲ್ಲಿಸದೆ ಮುಂದುವರಿಸುತ್ತಾಳೆ. ದಿನ ಕಳೆದಂತೆ ಮತ್ತಷ್ಟು ಹಠದಿಂದ ಎಲೆಗಳನ್ನು ತಿನ್ನುವುದನ್ನು ಬಿಟ್ಟು ಬಿಡುತ್ತಾಳೆ. ಕ್ರಮೇಣವಾಗಿ ಸರಿಯಾದ ಆಹಾರವಿಲ್ಲದೆ, ದೇಹಕ್ಕೆ ವಿಶ್ರಾಂತಿ ಇಲ್ಲದೆ ದೈಹಿಕವಾಗಿ ಕುಗ್ಗಿ ಹೋಗುತ್ತಾಳೆ. ತಾಯಿಯ ಹೆಸರು ಮೇಲಾದೇವಿ. ಮಗಳ ಸ್ಥಿತಿಯನ್ನು ಕಂಡು ಆಕೆಗೆ ದುಃಖವಾಗುತ್ತದೆ, ಅತ್ಯಂತ ಚಿಂತೆಯಾಗುತ್ತದೆ. ಮನಸ್ಸು ತಾಳಲಾರದೆ ನೋಡು ನೋಡು ಎಂದು ಜೋರಾಗಿ ಕೂಗುತ್ತಾಳೆ. ತನಗೆ ಅರಿವಿಲ್ಲದಂತೆಯೇ ಉಮಾ ಎಂದು ಕರೆಯುತ್ತಾಳೆ.
ಉಮಾ ಎಂಬುವುದು ಈಕೆಯ ಮತ್ತೊಂದು ಹೆಸರು. ಈಕೆಯ ತಪಸ್ಸನ್ನು ಕಂಡ ಮೂರು ಲೋಕಗಳು ಬೆಚ್ಚಿ ಬೀಳುತ್ತವೆ. ಮೂರು ಲೋಕದ ಎಲ್ಲಾ ಜನರು, ಋಷಿ ಮುನಿಗಳು, ಸಿದ್ದರು ಅಷ್ಟೇಕೆ ಸಾಮಾನ್ಯ ಜನರು ಇವಳನ್ನು ಹೊಗಳುತ್ತಾರೆ. ಕೊನೆಗೆ ನಿಜ ಸ್ಥಿತಿಯೆಂದು ತಿಳಿದ ಬ್ರಹ್ಮನು ಸ್ವತಃ ಆಕಾಶವಾಣಿಯಿಂದ ದೇವಿ ಎಂದು ಕರೆಯುತ್ತಾನೆ. ಈಕೆಯನ್ನು ಕುರಿತು ಬ್ರಹ್ಮನು ಇಲ್ಲಿಯವರೆಗೂ ಈ ಮೂರು ಲೋಕದಲ್ಲಿ ಯಾರೂ ಇಂತಹ ಕಠಿಣ ತಪಸ್ಸನ್ನು ಮಾಡಿಲ್ಲ. ಸಕಲ ಪುಣ್ಯವೋ ನಿನಗೆ ಲಭಿಸುತ್ತದೆ. ಇಂತಹ ಅಪರೂಪದ ಘಟನೆಗೆ ನೀನೆ ಕಾರಣ ಎಂದು ಹೊಗಳುತ್ತಾನೆ.
ಈ ತಪಸ್ಸಿನಿಂದ ಶಿವನು ನಿನ್ನ ಪತಿಯಾಗುತ್ತಾನೆ. ಅಷ್ಟೇ ಅಲ್ಲದೆ ನಿನ್ನ ಮನದಲ್ಲಿ ಇರುವ ಎಲ್ಲಾ ಆಸೆ ಆಕಾಂಕ್ಷೆಗಳು ಪೂರ್ಣಗೊಳ್ಳುತ್ತವೆ ಎಂದು ಹೇಳುತ್ತಾನೆ. ಇದನ್ನು ಒಪ್ಪುವ ಬ್ರಹ್ಮಚಾರಿಣಿ ತಪಸ್ಸನ್ನು ಪೂರ್ಣಗೊಳಿಸಿ ವಿಚಲಿತಳಾಗುತ್ತಾಳೆ. ಇದರ ಒಂದು ಮೂಲ ಸಂದೇಶವೆಂದರೆ ಯಾರೇ ಆದರೂ ಎಂತಹ ಕಷ್ಟದ ಸಂದರ್ಭ ಬಂದರೂ ಮನಸ್ಸನ್ನು ಬದಲಿಸಬಾರದು. ಈಕೆಯ ಪೂಜೆ ಮಾಡುವವರಿಗೆ ಇಷ್ಟಪಟ್ಟ ಪತಿಯು ದೊರೆಯುತ್ತಾರೆ. ಮಾತ್ರವಲ್ಲದೆ ಆಕೆಯ ಆತ್ಮ ಶಕ್ತಿಯು ಹೆಚ್ಚಾಗುತ್ತದೆ.
ಕೈಯಲ್ಲಿ ಗುಲಾಬಿ ಧರಿಸಿರುವ ಈಕೆಯು ಒಂದು ಕೈಯಲ್ಲಿ ಜಪಮಾಲೆ ಹಾಗೂ ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ಶ್ವೇತವಸ್ತ್ರಧಾರಿಣಿಯಾಗಿರುವ ಬ್ರಹ್ಮಚಾರಿಣಿಯು ತನ್ನ ಭಕ್ತರಿಗೆ ಸಂತೋಷ ಹಾಗೂ ಜ್ಞಾನವನ್ನು ನೀಡುವವಳೂ ಆಗಿದ್ದಾಳೆ.
ಬ್ರಹ್ಮಚಾರಿಣಿಯು ಮಂಗಳ ಗ್ರಹದ ಅಧಿಪತಿ. ತನ್ನ ಭಕ್ತರಿಗೆ ಅದೃಷ್ಟವನ್ನು ನೀಡುವವಳು ಹಾಗೂ ಮಾನಸಿಕ ಕ್ಷೋಭೆಯನ್ನು ಪರಿಹರಿಸಿ ನೆಮ್ಮದಿಯನ್ನು ದಯಪಾಲಿಸುವವಳೂ ಬ್ರಹ್ಮಚಾರಿಣಿ. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿದ್ದರೆ ಹಾಗೂ ಮಂಗಳ ದೋಷವಿದ್ದರೆ ಬ್ರಹ್ಮಚಾರಿಣಿಯನ್ನು ಪೂಜಿಸುವುದು ಒಳ್ಳೆಯದು.
ಬ್ರಹ್ಮಚಾರಿಣಿಗೆ ಬಹಳ ಇಷ್ಟವಾದ ಹೂವು ಮಲ್ಲಿಗೆ. ಹಾಗಾಗಿ ನವರಾತ್ರಿಯ ಎರಡನೇ ದಿನ ಮಲ್ಲಿಗೆಯಿಂದ ಈಕೆಯನ್ನು ಅಲಂಕರಿಸಿ. ಪೂಜಿಸಿ, ಮಾತೆಯ ಆಶೀರ್ವಾದವನ್ನು ಪಡೆದುಕೊಳ್ಳಿ. ಬ್ರಹ್ಮಚಾರಿಣಿಯ ಪೂಜೆಯನ್ನು ಮಾಡುವಾಗ 16 ವಿಧದ ಅರ್ಪಣೆಗಳನ್ನು ಮಾಡಿ, ಆರತಿಯೊಂದಿಗೆ ಪೂಜೆಯನ್ನು ಅಂತ್ಯಗೊಳಿಸಿ.
ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲೂ ನೆಮ್ಮದಿ ದೊರೆಯುವುದು.
ಈ ದಿನ ಬೇಗ ಸ್ನಾನ ಮಾಡಿ ಶುಭ್ರವಾದ ಮಡಿ ಬಟ್ಟೆಗಳನ್ನು ಧರಿಸಬೇಕು. ದೇವಿಯ ವಿಗ್ರಹ ಇಡುವ ಅಭ್ಯಾಸವಿದ್ದರೆ ವಿಗ್ರಹ ಅಥವಾ ಕಲಶವನ್ನು ಸ್ಥಾಪನೆ ಮಾಡಬೇಕು. ಕಲಶ ಸ್ಥಾಪನೆಯ ನಂತರ ದೇವಿಗೆ ವೀಳ್ಯದೆಲೆ ಮತ್ತು ಅಡಿಕೆಯನ್ನು ಸಮರ್ಪಣೆ ಮಾಡಿ. ನಂತರ ದೇವಿಗೆ ತಪ್ಪದೇ ಮಲ್ಲಿಗೆ ಹೂವನ್ನು ಅರ್ಪಿಸುವುದು ಈ ದಿನ ಬಹಳ ಮುಖ್ಯ. ನಂತರ ತುಪ್ಪದ ದೀಪ ಬೆಳಗಿಸಿ ಶ್ರೀ ದುರ್ಗಾ ಸಪ್ತಶತಿಯನ್ನು ಪಠಿಸುವುದರಿಂದ ದೇವಿಯ ಆಶಿರ್ವಾದ ಲಭಿಸುತ್ತದೆ. ಜೊತೆಗೆ ಈ ದಿನ ಬ್ರಹ್ಮಚಾರಿಣಿ ಮಂತ್ರವನ್ನು ತಪ್ಪದೇ ಈ ದಿನ ಓದಬೇಕು, ಆಗ ದೇವಿ ಸಂತುಷ್ಟಳಾಗಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಎರಡನೇ ದಿನ ದೇವಿಗೆ ಬೆಳಿಗ್ಗೆ ಮತ್ತು ಸಂಜೆ ಎರಡೂ ಹೊತ್ತು ನೈವೇದ್ಯವನ್ನು ಅರ್ಪಿಸಿ ಆರತಿ ಮಾಡಬೇಕು.