ಸಮಗ್ರ ನ್ಯೂಸ್: ಭಾರೀ ವಿವಾದ ಹಾಗೂ ಕೋಟ್ಯಂತರ ರೂ.ಗಳ ಅವ್ಯವಹಾರದ ಆರೋಪಕ್ಕೆ ಸಿಲುಕಿರುವ ಕಾರ್ಕಳ ತಾಲೂಕು ಬೈಲೂರು ಸಮೀಪದ ಉಮಿಕಲ್ ಬೆಟ್ಟದ ಮೇಲಿನ ಪರಶುರಾಮ ಮೂರ್ತಿ ದಿಢೀರನೇ ‘ಮಾಯ’ವಾಗಿದೆ ಎಂದು ಕಾಂಗ್ರೆಸ್ ನಾಯಕರು ಹಾಗೂ ಸ್ಥಳೀಯ ಅನೇಕರು ಆರೋಪಿಸುತ್ತಿದ್ದಾರೆ.
ತೀವ್ರ ಪರ ಹಾಗೂ ವಿರೋಧದ ಚರ್ಚೆಗಳಿಗೆ ಕಾರಣವಾಗಿದ್ದ ಯರ್ಲಪಾಡಿ ಗ್ರಾಪಂ ವ್ಯಾಪ್ತಿಯಲ್ಲಿರುವ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪರಶುರಾಮನ ಮೂರ್ತಿಯನ್ನು ಕಳೆದ ಜ.27ರಂದು ಪ್ರತಿಷ್ಠಾಪಿಸ ಲಾಗಿತ್ತು. ಬಳಿಕ ಮೂರ್ತಿಯ ಅಸಲೀತನದ ಬಗ್ಗೆ ಭಾರೀ ವಿವಾದಗಳು, ಪ್ರತಿಭಟನೆಗಳೆಲ್ಲಾ ನಡೆದ ಬಳಿಕ ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಥಳಕ್ಕೆ ಭೇಟಿ ನೀಡಿ ಸಂಬಂಧಿತ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದ್ದರು. ಅವರು ಇಲ್ಲಿರುವ ಮೂರ್ತಿ ‘ನಕಲಿ’ ಎಂಬುದನ್ನು ಪರೋಕ್ಷವಾಗಿ ಪತ್ರಕರ್ತರೆದುರು ‘ಒಪ್ಪಿ’ಕೊಂಡಿದ್ದರು.
ಈ ನಡುವೆ ಪಾರ್ಕ್‌ನಲ್ಲಿ ಬಾಕಿ ಉಳಿದ ಕಾಮಗಾರಿಯಲ್ಲಿ ಪರಶುರಾಮ ಮೂರ್ತಿಯನ್ನು ಬಲಪಡಿಸುವ, ಮೂರ್ತಿಗೆ ಸಿಡಿಲು ನಿರೋಧಕವನ್ನು ಅಳವಡಿಸುವ ಹಾಗೂ ಮೂರ್ತಿಗೆ ತುಕ್ಕು ನಿರೋಧಕ ಲೇಪನದ ಮತ್ತು ಇತರ ಮುಕ್ತಾಯದ ಕಾಮಗಾರಿಯನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ನವೆಂಬರ್ ತಿಂಗಳ ಕೊನೆಯವರೆಗೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಿ ಕಾರ್ಕಳ ತಹಶೀಲ್ದಾರರು ಕಳೆದ ವಾರ ಆದೇಶ ಹೊರಡಿಸಿದ್ದರು.
ಆದೇಶದ ಬಳಿಕ ಬೆಟ್ಟದ ಮೇಲಿರುವ ಪರಶುರಾಮ ಥೀಮ್ ಪಾರ್ಕ್ ಬಳಿ ಯಾರೊಬ್ಬರಿಗೂ ತೆರಳಲು ಪೊಲೀಸರು ಹಾಗೂ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಇದುವರೆಗೆ ಬೈಲೂರಿನಿಂದ ಕಾರ್ಕಳದೆಡೆ ತೆರಳುವಾಗ ಬೆಟ್ಟದ ಬುಡದಲ್ಲಿ ಹಾದುಹೋಗುವ ಹೆದ್ದಾರಿಯವರೆಗೆ ಸ್ಪಷ್ಟವಾಗಿ ಕಾಣುತಿದ್ದ ಪರಶುರಾಮ ಮೂರ್ತಿಯನ್ನು ಈಗ ಕಪ್ಪು ಪ್ಲಾಸ್ಟಿಕ್ ಶೀಟುಗಳಿಂದ ಮುಚ್ಚಿ ಸಾರ್ವಜನಿಕರಿಂದ ಮರೆಮಾಚಲಾಗಿದೆ.
ಇದೀಗ ನಿನ್ನೆ ರಾತ್ರಿ ದಿಢೀರ್ ಆಗಿ ಮೂರ್ತಿಯನ್ನು ‘ನಾಪತ್ತೆ’ ಮಾಡಲಾಗಿದೆ ಎಂದು ಸ್ಥಳಕ್ಕೆ ತೆರಳಿದ ಕಾಂಗ್ರೆಸ್ ನಾಯ ಕರು ಆರೋಪಿಸಿದ್ದಾರೆ. ಬೆಟ್ಟದ ಬುಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಹಾಗೂ ಹಾಲಿ ಕಾರ್ಕಳ ಪುರಸಭಾ ಸದಸ್ಯ ಶುಭದ ರಾವ್, ನಿನ್ನೆ ನಾವು ಇದೇ ಜಾಗದಲ್ಲಿ ನಿಂತು ಮಾಡಿದ ವಿಡಿಯೋದಲ್ಲಿ ಪರಶುರಾಮನ ಕೊಡಲಿ ಹಾಗೂ ಬಿಲ್ಲು ಕಾಣುತ್ತಿತ್ತು. ಆದರೆ ಇಂದು ನೋಡಿ ಅದೇ ಜಾಗದಲ್ಲಿ ನಿಂತು ನೋಡಿದರೆ ಎರಡೂ ಕಾಣಿಸುತ್ತಿಲ್ಲ. ಅಂದರೆ ನಿನ್ನೆ ರಾತ್ರಿಯೇ ನಕಲಿ ಮೂರ್ತಿಯನ್ನು ಅಲ್ಲಿಂದ ತೆರವು ಮಾಡಲಾಗಿದೆ ಎಂದರು.