ಲೀಚ್ ಎಂದು ಆಂಗ್ಲಭಾಷೆಯಲ್ಲಿ ಕರೆಸಿಕೊಳ್ಳುವ ‘ಜಿಗಣೆ’ ಅಥವಾ ‘ಇಂಬಳ’ ಸಾಮಾನ್ಯವಾಗಿ ತೇವವಿರುವ ಜಾಗಗಳಲ್ಲಿ, ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ. ಈ ಜೀವಿಯ ಆಹಾರ ಮತ್ತು ವಾಸಸ್ಥಳ ಎಲ್ಲವೂ ಜಲವೇ ಆಗಿರುವುದರಿಂದ ಇವುಗಳಿಗೆ ‘ಜಲೌಕ’ ಎಂದೂ ಕರೆಯುತ್ತಾರೆ.
ವಿಷಕಾರಕ ಜಿಗಣೆ ಮತ್ತು ವಿಷರಹಿತ ಜಿಗಣೆ ಎಂದು ಎರಡು ವಿಧಗಳಿದ್ದು, ವಿಷರಹಿತ ಜಿಗಣೆಗಳನ್ನು ಚಿಕಿತ್ಸೆಗಾಗಿ ಬಳಸುತ್ತಾರೆ. ಕಾಡು ಪ್ರದೇಶಗಳಲ್ಲಿ ತೇವವಿರುವ ಜಾಗಗಳಲ್ಲಿ ಹೇರಳವಾಗಿ ಕಂಡು ಬರುವ ಈ ಜಿಗಣೆಗಳು ನಮಗರಿವಿಲ್ಲದಂತೆಯೇ ನಮ್ಮ ದೇಹಕ್ಕೆ ಅಂಟಿಕೊಂಡು ರಕ್ತ ಹೀರುತ್ತದೆ. ವೇದನಾ ರಹಿತವಾಗಿ ರಕ್ತ ಹೀರುವ ವಿಶೇಷ ಶಕ್ತಿಯನ್ನು ಹೊಂದಿರುವ ಈ ಜಿಗಣೆಗಳು, ತಮ್ಮ ಹೊಟ್ಟೆ ತುಂಬುವವರೆಗೂ ರಕ್ತ ಹೀರಿ, ನಂತರ ತಾನಾಗಿಯೇ ಕಳಚಿ ಕೆಳಗೆ ಬೀಳುತ್ತದೆ. ಈ ಜಿಗಣೆಗಳ ಲಾಲಾರಸದಲ್ಲಿ ‘ಹಿರುಡಿನ್’ ಎಂಬ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ದ್ರವ್ಯಗಳಿರುತ್ತದೆ. ತನ್ನ ಭೂಷಕಗಳಿಂದ ರಕ್ತ ಹೀರುವ ವಿಶೇಷ ಗುಣವನ್ನು ಹೊಂದಿರುವ ಈ ಜಲೌಕಗಳನ್ನು ವೈದ್ಯಕೀಯ ಶಾಸ್ತ್ರದಲ್ಲಿ ಹಲವಾರು ರೋಗಗಳಲ್ಲಿ ಕೆಟ್ಟ ರಕ್ತವನ್ನು ಹೀರಲು ರಕ್ಷಮೋಕ್ಷಣ ಪ್ರಕ್ರಿಯೆಗೆ ಉಪಯೋಗಿಸಲಾಗುತ್ತಿದೆ. ಸಾಮಾನ್ಯವಾಗಿ ಸಿಹಿ ನೀರಿನಲ್ಲಿ ಬದುಕುವ ಈ ಜಿಗಣೆಗಳಲ್ಲಿ, ಕೆಲವು ಪ್ರಬೇಧಗಳು ಉಪ್ಪು ನೀರಿನಲ್ಲೂ ಬದುಕುತ್ತದೆ. ಜಿಗಣೆಗಳಲ್ಲಿ ಸುಮಾರು 700 ಪ್ರಬೇಧಗಳಿವೆ. ಇದರಲ್ಲಿ 100 ಪ್ರಬೇಧ ಉಪ್ಪುನೀರಿನಲ್ಲಿ ಬದುಕಿದರೆ, ಉಳಿದ 600 ಪ್ರಬೇಧಗಳು ಸಿಹಿ ನೀರಿನಲ್ಲಿ ಬದುಕುತ್ತದೆ. ‘ಹಿರುಡೋ ಮೆಡಿಸಿನಾಲಿಸ್’ ಎಂಬ ಪ್ರಬೇಧದ ಜಿಗಣೆಯನ್ನು ಹೆಚ್ಚಾಗಿ ವೈದ್ಯಕೀಯದಲ್ಲಿ ಚಿಕಿತ್ಸೆಗಾಗಿ ಬಳಸುತ್ತಾರೆ. ಪುರಾತನ ಚರಕ ಶುಶ್ರುತನ ಕಾಲದಿಂದಲೂ ಈ ಲೀಚ್ ಥೆರಪಿ ಬಳಕೆಯಲ್ಲಿದೆ. 18 ಮತ್ತು 19ನೇ ಶತಮಾನದಲ್ಲಿ ಈಜಿಫ್ಟ್, ಯುರೋಪ್, ಗ್ರೀಕ್ ದೇಶಗಳಲ್ಲಿಯೂ ಬಳಸಲಾಗುತ್ತಿತ್ತು. ತಮ್ಮ ದೇಹದ ಎರಡು ಬದಿಗಳಲ್ಲಿ ಭೂಷಕವನ್ನು ಹೊಂದಿರುವ ಈ ಜೀವಿಗಳು ಬಹಳ ಪರಿಣಾಮಕಾರಯಾಗಿ ರಕ್ತ ಹೀರಬಲ್ಲವು.
ಲೀಚ್ ಥೆರಪಿಯ
ಉಪಯೋಗಗಳು:-
ಈ ಚಿಕಿತ್ಸೆಯ ಸಮಯದಲ್ಲಿ ಜೀವಂತ ಜಿಗಣೆಗಳನ್ನು ಚಿಕಿತ್ಸೆ ನೀಡಬೇಕಾದ ದೇಹದ ಭಾಗಕ್ಕೆ ಕಚ್ಚಿಸಿ, ರಕ್ತ ಹೀರುವಂತೆ ಮಾಡಲಾಗುತ್ತದೆ. ಈ ಜಿಗಣೆಯ ಲಾಲರಸದಲ್ಲಿರುವ ಪ್ರೋಟೀನ್ ಮತ್ತು ಪೆಪ್ಟೈಡ್‍ಗಳು ರಕ್ತದ ಸಾಂದ್ರತೆಯನ್ನು ಕಡಮೆಯಾಗಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಆ ಮೂಲಕ ಸರಾಗವಾಗಿ ರಕ್ತ ಸಂಚಲನೆಯಾಗುವಂತೆ ಮಾಡುತ್ತದೆ. ಇದರಿಂದಾಗಿ ಆ ಭಾಗಕ್ಕೆ ರಕ್ತ ಸಂಚಾರ ಜಾಸ್ತಿಯಾಗಿ, ಅಂಗಾಂಶಗಳು ಕೊಳೆಯದಂತೆ ಮತ್ತು ಜೀವಕೋಶಗಳಿಗೆ ಹೆಚ್ಚಿನ ರಕ್ತ ಪರಿಚಲನೆಯಾಗಿ, ಜೀವಕೋಶಗಳನ್ನು ಪುನರ್‍ಜೀವನಗೊಳಿಸುತ್ತದೆ. ಜಿಗಣೆ ಕಚ್ಚಿದ ಜಾಗದಲ್ಲಿ ಸಾಮಾನ್ಯವಾಗಿ ‘ಙ’ ಆಕಾರದ ಗಾಯವಾದರೂ ಯಾವುದೇ ಕಲೆಯಿಲ್ಲದೆ ಗಾಯ ಗುಣವಾಗುತ್ತದೆ.
- ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮತ್ತು ಉತ್ಕರ್ಷಿಸುವ ಕಾರಣದಿಂದ ಹಾಗೂ ಹೆಪ್ಪುಗಟ್ಟದಂತೆ ತಡೆಯುವ ಸಾಮಥ್ರ್ಯವಿರುವುದರಿಂದಾಗಿ ಹೃದಯ ಸಂಬಂಧಿ ರೋಗಗಳು ಮತ್ತು ರಕ್ತ ಪರಿಚಲನೆಯನ್ನು ಕುಗ್ಗಿಸುವ ರೋಗಗಳಲ್ಲಿ ಈ ಲೀಚ್ ಥೆರಪಿಯನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆ. ತೀವ್ರ ಮಧುಮೇಹ ರೋಗದಿಂದಾಗಿ ರಕ್ತನಾಳಗಳು ಕುಗ್ಗಿ, ಪೆಡಸುಗೊಂಡು ರಕ್ತ ಸಂಚಾರದಿಂದ ಕಡಮೆಯಾಗಿ, ಅಂಗಾಂಗ ಕೊಳೆತು ಹೋದಾಗ, ಲೀಚ್ ಬಳಸಿ ಅಂಗಾಂಗಗಳನ್ನು ಕೊಳೆಯದಂತೆ ಮಾಡುವ ಸಾಮಥ್ರ್ಯ ಈ ಲೀಚ್ ಥೆರಪಿಗೆ ಇದೆ.
- ಪ್ಲಾಸ್ಟಿಕ್ ಸರ್ಜರಿ ಮತ್ತು ದೇಹ ಅಂಗಾಂಗಗಳ ಪುನರ್‍ಜೀವನ ಶಸ್ತ್ರ ಚಿಕಿತ್ಸೆಯಲ್ಲಿ ರಕ್ತ ಸಂಚಾಲನೆ ಸರಾಗವಾಗುವಂತೆ ಮಾಡಲು ಮತ್ತು ರಕ್ತ ಹೆಪ್ಪುಗಟ್ಟಿದಂತೆ ತಡೆಯಲು ಲೀಚ್ ಥೆರಪಿ ಬಳಸುತ್ತಾರೆ.
- ಸಂಧಿವಾತ, ಆಸ್ಪಿಯೋ ಆರ್ಥೈಟಿಸ್ ಎಂಬ ಗಂಟುಗಳ ಉರಿಯೂತದ ರೋಗದಲ್ಲಿಯೂ ಕೆಟ್ಟ ರಕ್ತವನ್ನು ಹೀರಲು ಈ ಲೀಚ್ ಥೆರಪಿ ಬಳಸುತ್ತಾರೆ.
- ಜಿಗಣೆಗಳ ಲಾಲಾರಸದಿಂದ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಔಷಧಗಳನ್ನು ರಕ್ತದೊತ್ತಡ, ಜಡ್ಡುಗಟ್ಟಿದ ರಕ್ತನಾಳಗಳು, ಚರ್ಮದ ತೊಂದರೆ, ಹೆಮರಾಯ್ಡ್ ಚಿಕಿತ್ಸೆಯಲ್ಲಿ ಮತ್ತು ಗಂಟುನೋವುಗಳ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.
- ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ, ಕ್ಯಾನ್ಸರ್ ರಕ್ತದಲ್ಲಿ ಹರಡದಂತೆ ತಡೆಯಲು, ನಾಯಿಗಳಲ್ಲಿ ಈ ಜಿಗಣೆಗಳ ಲಾಲಾರಸದಿಂದ ತಯಾರಿಸಿದ ಔಷಧಿಗಳನ್ನು ಪ್ರಾಯೋಗಿಕವಾಗಿ ಬಳಸಲಾಗಿದೆ.
- ತಲೆಯಲ್ಲಿ ಕೂದಲು ಉದುರುವುದು, ತಲೆಯಲ್ಲಿ ಹೊಟ್ಟುಗಳ ತೊಂದರೆಯ ಚಿಕಿತ್ಸೆಗಳಿಗೂ ಜಿಗಣೆಯನ್ನು ಬಳಸುತ್ತಾರೆ.
- ವಿಪರೀತ ಗಂಟುನೋವು, ಸಂಧಿನೋವು ಇದ್ದಾಗ ಲೀಚ್ ಥೆರಪಿ ಮಾಡಿ, ಆ ಜಾಗದಲ್ಲಿ, ಅರಿವಳಿಕೆ ನೀಡಿದಂತಾಗಿ ತಾತ್ಕಾಲಿಕ ನೋವು ಶಮನವಾಗುತ್ತದೆ. ಅದೇ ಸಮಯದಲ್ಲಿ ಜಿಗಣೆಯ ಲಾಲಾರಸದಿಂದ ಬಿಡುಗಡೆಗೊಂಡ ಕಿಣ್ವಗಳು ಗಂಟಿನ ಉರಿಯೂತವನ್ನು ಕಡಮೆ ಮಾಡಿ ನೋವನ್ನು ಶಮನಗೊಳಿಸುತ್ತದೆ. ಅದೇ ರೀತಿ ಕೆಟ್ಟ ರಕ್ತವನ್ನು ಹೀರಿ ಗಂಟುಗಳ ಸರಾಗ ಚಲನೆಗೆ ಅವಕಾಶ ಮಾಡಿಕೊಡುತ್ತದೆ.
- ಕಿವಿನೋವು, ಕಿವುಡುತನ ಮತ್ತು ಟಿನಿಟಸ್ ಎಂಬ ಕೇಳುವ ಪ್ರಕ್ರಿಯೆಯ ರೋಗದ ಚಿಕಿತ್ಸೆಯಲ್ಲಿಯೂ ಜಿಗಣೆಯನ್ನು ಬಳಸಲಾಗುತ್ತದೆ.
- ಗ್ಲಾಕೋಮಾ ಎಂದು ಕಣ್ಣಿನ ಆಂತರಿಕ ಒತ್ತಡ ಹೆಚ್ಚಿಸುವ ರೋಗದ ಚಿಕಿತ್ಸೆಯಲ್ಲಿಯೂ ಈ ಜಿಗಣೆಯನ್ನು ಬಳಸುತ್ತಾರೆ,
- ವಸಡಿನ ಊತ ಮತ್ತು ವಸಡು ಊದಿಕೊಂಡು ರಕ್ತ ಸ್ರಾವವಾಗುವ ಸಂದರ್ಭದಲ್ಲಿಯೂ ಈ ಲೀಚ್ ಥೆರಪಿ ಬಳಸಬಹುದು. ಕೆಟ್ಟ ರಕ್ತವನ್ನು ಹಿರಿ ಉರಿಯೂತವನ್ನು ಕಡಮೆ ಮಾಡಿ, ರಕ್ತ ಪರಿಚಲನೆ ಹೆಚ್ಚಿಸಿ, ಬ್ಯಾಕ್ಟೀರಿಯಾಗಳ ಸಂಖ್ಯೆ ವೃದ್ಧಿಸದಂತೆ ತಡೆಯುವ ಸಾಮಥ್ರ್ಯ ಲೀಚ್ ಥೆರಪಿಗೆ ಇದೆ. ಅದೇ ರೀತಿ ನಾಲಗೆ ಕೆಳಗೆ ರಕ್ತ ಹೆಪ್ಪುಗಟ್ಟಿ, ಉಸಿರಾಟಕ್ಕೆ ತೊಂದರೆ ಆಗಿ, ನಾಲಗೆ ಒಳಗೆ ರಕ್ತ ಹೆಪ್ಪುಗಟ್ಟಿಕೊಂಡಾಗ ನಾಲಗೆಯು ಊದಿಕೊಂಡಾಗ ಕೂಡಾ ಲೀಚ್ ಥೆರಪಿ ಮಾಡಿದ ಉದಾಹರಣೆ ಇದೆ.
- ಸೌಂದರ್ಯವರ್ದಕ ಚಿಕಿತ್ಸೆಗಳಲ್ಲಿಯೂ ಈ ಲೀಚ್ ಥೆರಪಿ ಬಳಸುತ್ತಾರೆ. ಇದರ ಮೂಲಕ ದೇಹದ ರಕ್ತದಲ್ಲಿನ ಕಲ್ಮಷಗಳು ಮತ್ತು ಮುಪ್ಪು ತರುವ ರಾಸಾಯನಿಕಗಳನ್ನು ವರ್ಜಿಸಿ, ದೇಹಕ್ಕೆ ನವಚೈತನ್ಯ ಮತ್ತು ಉಲ್ಲಾಸ ಬರುವಂತೆ ಮಾಡಲಾಗುತ್ತದೆ.
ಲೀಚ್ ಥೆರಪಿಯ ಅಡ್ಡ ಪರಿಣಾಮಗಳು:-
- ತುರಿಕೆ, ಗುಳ್ಳೆ ಉಂಟಾಗಬಹುದು, ಅಂಗಾಂಶ ಕೊಳೆಯುವುದು ಕೆಲವೊಮ್ಮೆ ಉಂಟಾಗಬಹುದು. ಕೆಲವೊಂದು ಪ್ರಬೇಧದ ಜಿಗಣೆಗಳ ಲಾಲಾರಸದಲ್ಲಿ ವಿಷಕಾರಕ ವಸ್ತು ಇದ್ದು, ಅವುಗಳು ಮೇಲಿನ ಅಡ್ಡ ಪರಿಣಾಮಕ್ಕೆ ಕಾರಣವಾಗುತ್ತದೆ.
- ಬ್ಯಾಕ್ಟೀರಿಯಾ ಸೋಂಕು ಕೂಡಾ ತಗಲುವ ಸಾಧ್ಯತೆ ಇದೆ. ಲೀಚ್‍ಗಳ ಮುಖಾಂತರ ಬರುವ ಈ ರೋಗಾಣುಗಳು ಶ್ವಾಸಕೋಶಗಳ ಸೋಂಕು (ನ್ಯೂವÉೂೀನಿಯ) ಮಾಂಸ ಖಂಡಗಳ ಕೊಳೆಯುವಿಕೆ, ಮತ್ತು ಸೆಪ್ಟಿಸೀಮಿಯಾ ಎಂಬ ರಕ್ತದ ಸೋಂಕು ರೋಗಕ್ಕೂ ಕಾರಣವಾಗಿ ಮಾರಣಾಂತಿಕವಾಗುವ ಸಾಧ್ಯತೆಯೂ ಇಲ್ಲದಿಲ್ಲ. ಸುಮಾರು 2ರಿಂದ 10 ಶೇಕಡಾ ರೋಗಿಗಳಲ್ಲಿ ಈ ಸಾಧ್ಯತೆ ಇದೆ.
- ಅತಿಯಾದ ರಕ್ತಸ್ರಾವ, ರಕ್ತ ಸೋರಿಕೆಯಾಗುವ ಸಾಧ್ಯತೆಯೂಇದೆ.
ಕೊನೆಮಾತು:-
ಪುರಾತನ ಕಾಲದಿಂದಲೂ ಹತ್ತು ಹಲವು ಕಾಯಿಲೆಗಳಿಗೆ ಬಳಸುತ್ತಿದ್ದ ಈ ‘ಲೀಚ್ ಥೆರಪಿ’ ಬಹಳ ಪರಿಣಾಮಕಾರಿ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲದೆ ಎಲ್ಲರೂ ಎಲ್ಲೆಂದರಲ್ಲಿ ಬಳಸಿದ ಪರಿಣಾಮವಾಗಿ ಈ ಚಿಕಿತ್ಸೆ ಪದ್ಧತಿ ಹಲವು ವರ್ಷಗಳ ಕಾಲ ಕಣ್ಮರೆಯಾಗಿತ್ತು. ಆದರೆ ಇದೀಗ ಹಲವಾರು ವೈಜ್ಞಾನಿಕ ಸಂಶೋಧನೆಗಳು ನಡೆದು, ವೈಜ್ಞಾನಿಕ ತಳಹದಿಯ ಮೇಲೆ ಕೆಲವೇ ಕೆಲವು ರೋಗಗಳಲ್ಲಿ ಪರಿಣಾಮಕಾರಿ ಎಂಬುದಾಗಿ ಸಾಬಿತಾಗಿದೆ. ಪ್ಲಾಸ್ಟಿಕ್ ಸರ್ಜರಿ, ಅಂಗಾಂಗ ಪುನರ್‍ಜೀವನ ಸರ್ಜರಿಗಳಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿದೆ. ಮತ್ತು ಯಾವುದೇ ಅಡ್ಡ ಪರಿಣಾಮ ಮತ್ತು ತೊಂದರೆಗಳು ಕಂಡು ಬಂದಿಲ್ಲ. ಅದೇ ರೀತಿ ಮಧುಮೇಹ ನಿಯಂತ್ರಣ ಮತ್ತು ಅರ್ಬುದ ರೋಗ ಹರಡುವಿಕೆಯನ್ನೂ ತಡೆಯುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಈ ಲೀಚ್ ಥೆರಪಿ ಬಳಕೆಯಾಗುವ ದಿನಗಳು ದೂರವಿಲ್ಲ. ನಮಗರಿವಿಲ್ಲದಂತೆ ಹೊಟ್ಟೆಪಾಡಿಗಾಗಿ ರಕ್ತಹೀರುವ ಈ ಜಿಗಣೆಗಳು ಮುಂದೊಂದು ದಿನ, ಮನುಷ್ಯನ ರಕ್ತಹಿರಿ ಜೀವ ಉಳಿಸಲು ನೆರವಾಗಿ ರಕ್ತಪಿಪಾಸು ಎಂಬ ಹಣೆ ಪಟ್ಟಿಯಿಂದ ಹೊರಬಂದರೂ ಆಶ್ಚರ್ಯವೇನಲ್ಲ. ಒಟ್ಟಿನಲ್ಲಿ ಜಿಗಣೆಗಳಿಂದ ಒಂದಷ್ಟು ರಕ್ತ ಹೀರಿಸಿಕೊಂಡು ಜೀವ ಉಳಿಸಿಕೊಂಡಲ್ಲಿ, ಅದರಿಂದ ಮನುಕುಲಕ್ಕೆ ಒಳಿತಾದಲ್ಲಿ, ಅದರಷ್ಟು ಸಂತಸದ ವಿಚಾರ ಇನ್ನೊಂದಿಲ್ಲ ಎಂದರೂ ತಪ್ಪಲ್ಲ.
ಡಾ|| ಮುರಲೀ ಮೋಹನ್ ಚೂಂತಾರು
BDS MDS DNB MBA MOSRCSEd
Consultant oral and maxillofacial surgery
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323