ಸಮಗ್ರ ನ್ಯೂಸ್: ಕರ್ನಾಟಕಕ್ಕೆ ಮತ್ತೆ ಶಾಕ್ ಎದುರಾಗಿದ್ದು, ಮತ್ತೆ 15 ದಿನ ತಮಿಳುನಾಡಿಗೆ ಪ್ರತಿನಿತ್ಯ 3000 ಕ್ಯೂಸೆಕ್ ನೀರು ಹರಿಸುವಂತೆ CWRC ಆದೇಶ ಹೊರಡಿಸಿದೆ.
ಕಳೆದ ಸಭೆಯಲ್ಲಿ ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯುಸೆಕ್ ನೀರನ್ನು 15 ದಿನಗಳ ಕಾಲ ಬಿಡುವಂತೆ ಆದೇಶ ಹೊರಡಿಸಿತ್ತು. ಇದೀಗ ಮತ್ತೆ ಇದೇ ಆದೇಶ ಹೊರಡಿಸಿದೆ.
ಇಂದು ನಡೆದ ಸಭೆಯಲ್ಲಿ ರಾಜ್ಯದ ಪರವಾಗಿ ನೀರಾವರಿ ನಿಗಮದ ಎಂಡಿ ಮಹೇಶ್ ಭಾಗಿಯಾಗಿದ್ದರು . ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಬರ ಪರಿಸ್ಥಿತಿ ಇದೆ. ಮಳೆ ಹಾಗೂ ನೀರಿನ ಕೊರತೆ ಇದೆ. ಈ ಭಾಗದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂಬ ಮಾಹಿತಿಯನ್ನು ಸಭೆಯ ಗಮನಕ್ಕೆ ತರಲಾಗಿದೆ. ಮುಂದಿನ ವಾರದಿಂದ ತಮಿಳುನಾಡಿಗೆ ವಾಯುವ್ಯ ಮಾರುತಗಳಿಂದ ಮಳೆಯಾಗಲಿದ್ದು, ಅಲ್ಲಿನ ನೀರಿನ ಸಮಸ್ಯೆ ನಿವಾರಣೆ ಆಗುತ್ತದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರೆದಿರುವುದರಿಂದ ನೀರು ಬಿಡುವುದು ಕಷ್ಟವಾಗುತ್ತದೆ ಎಂದು ರಾಜ್ಯದ ಅಧಿಕಾರಿಗಳು ವಾದ ಮಂಡಿಸಿದ್ದರು.
ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಪ್ರತಿದಿನ 3 ಸಾವಿರ ಕ್ಯುಸೆಕ್ ನೀರು ಬಿಡುವ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿದಿತ್ತು.ಇದೀಗ ಮತ್ತೆ 15 ದಿನ ತಮಿಳುನಾಡಿಗೆ ಪ್ರತಿನಿತ್ಯ 3000 ಕ್ಯೂಸೆಕ್ ನೀರು ಹರಿಸುವಂತೆ CWRC ಆದೇಶ ಹೊರಡಿಸಿದೆ.