ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯ ಇನ್ನೊಂದು ಪ್ರಮುಖ ವಿಕೆಟ್ ಪತನವಾಗಿದೆ. ಕೋಟೆ ನಾಡಿನ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಬಿಜೆಪಿ ತೊರೆಯಲು ನಿರ್ಧರಿಸಿದ್ದಾರೆ. ಅ.20ರಂದು ಅವರು ಕಾಂಗ್ರೆಸ್ ಸೇರ್ಪಡೆಯಾಗಲು ಮುಹೂರ್ತ ನಿಗದಿಯಾಗಿದ್ದು, ಈ ಬಗ್ಗೆ ಅವರೇ ಖಚಿತಪಡಿಸಿದ್ದಾರೆ.
ಮಂಗಳವಾರ ಹಿರಿಯೂರಿನಲ್ಲಿ ಕಾರ್ಯಕರ್ತರ ಜತೆ ಸಭೆ ನಡೆಸಿದ ಬಳಿಕ ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ. ಇದರಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನಡೆಸಿರುವ ಆಪರೇಶನ್ ಹಸ್ತ ಯಶಸ್ವಿಯಾದಂತಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಮಾಜಿ ಶಾಸಕಿ ನಿವಾಸಕ್ಕೆ ಡಿಕೆಶಿ ಭೇಟಿ ನೀಡಿದ್ದಾಗ, ಆ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ತಾನು ಬಿಜೆಪಿ ತೊರೆಯುವುದಿಲ್ಲ ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದರು. ಆದರೆ, ಈಗ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಅವರೇ ಘೋಷಿಸಿದ್ದಾರೆ.
ಚಿತ್ರದುರ್ಗದ ಯಾದವ ಗುರುಪೀಠಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು, ಇದೇ ತಿಂಗಳು 20 ರಂದು ಕಾಂಗ್ರೆಸ್ ಸೇರಬೇಕು ಅಂದುಕೊಂಡಿದ್ದೇನೆ. ನಮ್ಮ ಸಮುದಾಯದ ಹಿತ ಬಯಸುವವರು ಬಂದು ಮಾತಾಡಿ, ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಬಹಳ ಜನ ಹೇಳಿದ್ದಾರೆ. ಡಿಕೆಶಿ ಅವರು ನಿಮ್ಮ ತಂದೆಗೆ ಈ ಹಿಂದೆ ಅನ್ಯಾಯ ಆಗಿದೆ, ಅದನ್ನು ಸರಿಮಾಡಿಕೊಳ್ಳಿ ಎಂದು ಹೇಳಿದ್ದರು. ಹೀಗಾಗಿ ಬದಲಾವಣೆಗಾಗಿ ಕಾಂಗ್ರೆಸ್ ಸೇರುತ್ತೇನೆ. ಆದಷ್ಟು ಬೇಗ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ತಿಳಿಸಿದ್ದಾರೆ.