ಸಮಗ್ರ ನ್ಯೂಸ್: ಪಾರದರ್ಶಿತ್ವದ ಜತೆ ಪ್ರಾಮಾಣಿಕ ಜನರ ಬಲದಿಂದ ಸಹಕಾರಿ ರಂಗವನ್ನು ಆರ್ಥಿಕವಾಗಿ ಸಶಕ್ತಗೊಳಿಸುವ ಕಾರ್ಯತತ್ಪರ ನಿಸ್ವಾರ್ಥ ಸಂಘಟನೆ ಸಹಕಾರ ಭಾರತಿ. ಸಹಕಾರಿ ಕ್ಷೇತ್ರದ ಸದೃಢತೆ ಮುಖೇನ ಸಂಪನ್ನ ರಾಷ್ಟ್ರ ನಿರ್ಮಾಣ ಸಹಕಾರ ಭಾರತಿಯ ಪ್ರಧಾನ ಧ್ಯೇಯ ಎಂದು ಕ್ಯಾಂಪ್ಕೋ ಮಾಜಿ ಅಧ್ಯಕ್ಷ, ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕೊಂಕೋಡಿ ಪದ್ಮನಾಭ ಹೇಳಿದರು.
ಸಹಕಾರಿ ಭಾರತಿ ಮಹಾನಗರ ಜಿಲ್ಲೆ ಮಂಗಳೂರು ವತಿಯಿಂದ, ಅ.2ರಂದು ನಗರದ ಶರವು ಶ್ರೀ ಮಹಾಗಣಪತಿ ದೇಗುಲ ಬಳಿಯ ಬಾಲಂಭಟ್ ಸಭಾಂಗಣದಲ್ಲಿ ಸಂಪನ್ನಗೊಂಡ, ಸಹಕಾರಿ ಸಂಸ್ಥೆಗಳ ಸಿಬ್ಬಂದಿಗಳಿಗೆ ಜಿಎಸ್‌ಟಿ ಕುರಿತ ಮಾಹಿತಿ ಕಾರ್ಯಾಗಾರದ ಸಮಾರೋಪದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ರಾಮರಾಜ್ಯವಾಗಿಸಿ: ಸಮಾಜದ ಕೊಡ ತುಂಬಿದಾಗ ಜೀವನದ ಕೊಡ ತುಂಬುವುದು ಎಂದು ವಿಶ್ಲೇಷಿಸಿದ ಕೊಂಕೋಡಿ, ಯುವಶಕ್ತಿ ಸಹಕಾರ ರಂಗದಲ್ಲಿ ಸಕ್ರಿಯವಾಗಿ ತೊಡಗಿ, ಈ ದೇಶವನ್ನು ರಾಮರಾಜ್ಯ, ಗ್ರಾಮರಾಜ್ಯವಾಗಿ ಪರಿವರ್ತಿಸಿ ಎಂದು ಕರೆ ನೀಡಿದರು.
ಶ್ರೀ ಗೋಕರ್ಣನಾಥೇಶ್ವರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ರಾಮಚಂದ್ರ, ಸರಕಾರದ ಹೊಸ ಕಾನೂನುಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಇಂತಹ ಕಾರ್ಯಾಗಾರಗಳು ನಿರಂತರ ನೆಲೆಯಲ್ಲಿ ನಡೆಯಲೆಂದು ಹಾರೈಸಿದರು.
ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ಹಾಗೂ ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆ ಅಧ್ಯಕ್ಷ ಗಣೇಶ್ ಶೆಣೈ, ೩೩ಸಾವಿರ ಕಿ.ಮೀ. ಪಾದಯಾತ್ರೆಯಲ್ಲೇ ಭಾರತ ಸುತ್ತಿದ ನಾರಾಯಣ ಕೆದಿಲಾಯರಂತೆ, ಸಹಕಾರ ಭಾರತಿಯನ್ನು ಕಟ್ಟಿ ಬೆಳೆಸುವಲ್ಲಿ ಕೊಂಕೋಡಿ ಅವರ ಅವಿರತ ಹೋರಾಟ ಗಮನಾರ್ಹ ಎಂದು ಪ್ರಶಂಸಿಸಿದರು.
ಈ ಸಂಧರ್ಭದಲ್ಲಿ ಸಂಪನ್ಮೂಲ ವ್ಯಕ್ತಿ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತೆ ಹೇಮಲತಾ ಅವರನ್ನು ಸಹಕಾರ ಭಾರತಿ ಮಹಿಳಾ ಪ್ರಮುಖ್ ಸುಜಯ, ಸಹಕಾರ ಭಾರತಿ ಮಹಾನಗರ ಜಿಲ್ಲಾ ಉಪಾಧ್ಯಕ್ಷ ಮದಲಾಕ್ಷಿ ರೈ ಮತ್ತು ಶಾಂತಾ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಕೆಎಂಎಫ್ ಅಧ್ಯಕ್ಷ ಸುಚರಿತ ಶೆಟ್ಟಿ ದೀಪ ಪ್ರಜ್ವಲಿಸಿ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿದ್ದರು. ಸಶಕ್ತ ಆರ್ಥಿಕತೆ, ಉದ್ಯಮಗಳ ಅಭಿವೃದ್ಧಿ ಜತೆ ದೇಶದ ಸರ್ವತೋಮುಖ ಅಭ್ಯುದಯಕ್ಕೆ ಜಿಎಸ್‌ಟಿ ಪೂರಕವೆಂದು ಅವರು ಅಭಿಪ್ರಾಯಿಸಿದ್ದರು.
ಬೆಳಗ್ಗೆ ನಡೆದ ಮಾಹಿತಿ ಕಾರ್ಯಾಗಾರದಲ್ಲಿ, ಜಿಎಸ್‌ಟಿಯಡಿ ಸಹಕಾರಿ ರಂಗ ಅಥವಾ ಸಹಕಾರಿ ರಂಗಕ್ಕೆ ಜಿಎಸ್‌ಟಿ ಯಾವ ತೆರ ಅನ್ವಯ, ರಾಜ್ಯದೊಳಗಿನ ವಹಿವಾಟುಗಳಿಗೆ ಜಿಎಸ್‌ಟಿ, ಅಂತಾರಾಜ್ಯ ವಹಿವಾಟುಗಳಿಗೆ ಐಜಿಎಸ್‌ಟಿ ಯಾವ ಪ್ರಮಾಣದಲ್ಲಿ ಮತ್ತು ಹೇಗೆ ಅನ್ವಯ, ಜಿಎಸ್‌ಟಿ ಪ್ರಕಾರ ಯಾವುದು ಹಣಕಾಸು ಸಂಸ್ಥೆ, ಹಾಲಿಗೆ ಜಿಎಸ್‌ಟಿ ಇಲ್ಲ, ಆದರೆ ಹಾಲಿನುತ್ಪನ್ನಗಳಿಗೆ ತೆರಿಗೆ ಇದೆ. ರಿವರ್ಸ್ ಚಾರ್ಜ್, ಪಾರ್ವರ್ಡ್ ಚಾರ್ಜ್ ಹೀಗೆ ಎರಡು ರೀತಿ ತೆರಿಗೆ ಪಾವತಿ, ವಸ್ತು ಅಥವಾ ಸೇವೆಗಳ ಪೂರೈಕೆಯ ಸಮಯ -ಜಾಗದ ಪ್ರಾಮುಖ್ಯತೆ, ಟ್ಯಾಕ್ಸ್ ಇನ್‌ವಾಯ್ಸ್ ಹೇಗಿರಬೇಕು, ಜಿಎಸ್‌ಟಿ ಕಾಯಿದೆ ಕಲಂ 16, 17ರ ಮಹತ್ತ್ವ ಇತ್ಯಾದಿ ಸಮಗ್ರ ಮಾಹಿತಿಯನ್ನು ಬಹಳ ಸೊಗಸಾಗಿ ಸಹಕಾರಿ ಸಿಬ್ಬಂದಿಗಳಿಗೆ ವಿವರಿಸಿದ ಸಂಪನ್ಮೂಲ ವ್ಯಕ್ತಿ, ವಾಣಿಜ್ಯ ತೆರಿಗೆ ಇಲಾಖೆ ಅಸಿಸ್ಟೆಂಟ್ ಕಮಿಶನರ್ ಹೇಮಲತಾ, ಸಹಕಾರಿ ಸಿಬ್ಬಂದಿಗಳ ಶಂಕೆಗಳು, ಗೊಂದಲಗಳಿಗೆ ಸೂಕ್ತವಾಗಿ ಪ್ರತ್ಯುತ್ತರಿಸಿದರು.
ಹಿಂದಿನ ಸರ್ಕಾರಗಳು ಅನುಷ್ಟಾನ ಸಾಧ್ಯವಾಗದೆ ಕೈಬಿಟ್ಟಿದ್ದ ಜಿಎಸ್‌ಟಿಯನ್ನು ದೇಶಾದ್ಯಂತ ಜಾರಿಗೊಳಿಸುವ ದಿಟ್ಟ ಹೆಜ್ಜೆಯನ್ನು ಪ್ರಥಮ ಬಾರಿಗೆ ಇರಿಸಿದ್ದು, ವಿಶ್ವದ ನೆಚ್ಚಿನ ಜನನಾಯಕ ಪ್ರಧಾನಿ ಮೋದಿ ಎಂದು ಮುಖ್ಯ ಅತಿಥಿ ಕ್ಯಾಂಪ್ಕೋ ನಿರ್ದೇಶಕ ಕೃಷ್ಣ ಪ್ರಸಾದ್ ಮಡ್ತಿಲ ಪ್ರಶಂಸಿಸಿದರು. ಸಹಕಾರ ಭಾರತಿಯ ಜಿ.ಆರ್. ಪ್ರಸಾದ್ ಇನ್ನೋರ್ವ ಅತಿಥಿಯಾಗಿದ್ದರು. ಸ. ಭಾರತಿ ಮಹಾನಗರ ಜಿಲ್ಲೆ ಮಂಗಳೂರು ಅಧ್ಯಕ್ಷ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಅರವಿಂದಕುಮಾರ್ ಶೆಟ್ಟಿ, ಸಂಸ್ಥೆಯ ಪ್ರಭಾರ ಜನರಲ್ ಮೆನೇಜರ್ ಅನಿತಾ, ಸಹಿತ ವಿವಿಧ ಸಹಕಾರಿ ಸಂಸ್ಥೆಗಳ ನಿರ್ದೇಶಕರು ಉಪಸ್ಥಿತರಿದ್ದರು. 25ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳ ಪ್ರತಿನಿಗಳು ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸಹಕಾರ ಭಾರತಿ ಮಂಗಳೂರು ಮಹಾನಗರ ಪ್ರ. ಕಾರ್ಯದರ್ಶಿ ಜಿ.ಆರ್. ಪ್ರಸಾದ್ ಸ್ವಾಗತಿಸಿ, ಚೀರುಂಬಾ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಅಧ್ಯಕ್ಷೆ ಶಾಂತಾ ವಂದಿಸಿದರು.