ಸಮಗ್ರ ನ್ಯೂಸ್: ಸರಿಯಾದ ಕೊಠಡಿ ವ್ಯವಸ್ಥೆ, ಕ್ರೀಡಾ ಮೈದಾನ, ಪ್ರಯೋಗಾಲಯ ಹಾಗೂ ಅಗ್ನಿ ಸುರಕ್ಷತಾ ಕ್ರಮಗಳಿಲ್ಲದಿದ್ದರೂ ಶಾಲೆ ಯನ್ನು ಮೇಲ್ದರ್ಜೆಗೇರಿಸಲು ಅನುಮತಿ ನೀಡಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡುವಂತೆ ಕೋರಿದ್ದ ಎರಡು ಖಾಸಗಿ ಶಾಲೆಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಶಾಲೆಗಳನ್ನು ವ್ಯವಹಾರ ಕೇಂದ್ರವನ್ನಾಗಿಸಲು ಸಾಧ್ಯವಿಲ್ಲ. ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯದೆ ಶಾಲೆ ನಡೆಸಿ, ಅಪ್ರಾಪ್ತ ಮಕ್ಕಳ ಜೀವದ ಜೊತೆಗೆ ಚೆಲ್ಲಾಟವಾಡಲು ಅವಕಾಶ ನೀಡುವುದಿಲ್ಲ ಎಂದು ಕೆಂಡಕಾರಿದೆ.
ಖಾಸಗಿ ಶಾಲೆಯೊಂದು ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ, ಅರ್ಜಿದಾರ ಶಾಲೆಗಳನ್ನು ತರಾಟೆಗೆ ತೆಗೆದು ಕೊಂಡಿತು. ಅಲ್ಲದೆ, ಶಾಲೆಯಲ್ಲಿ ಅಗತ್ಯ ಮೂಲ ಸೌಕರ್ಯಗಳಿಲ್ಲದ ಕಾರಣ ಮೇಲ್ದರ್ಜೆಗೇರಿಸಲು ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಸರ್ಕಾರಿ ಪ್ರಾಧಿಕಾರಗಳ ಕ್ರಮ ದುರುದ್ದೇಶಪೂರಿತವಾಗಿಲ್ಲ ಎಂದು ಅರ್ಜಿ ಇತ್ಯರ್ಥಪಡಿಸಿತು.
ಇದಕ್ಕೂ ಮುನ್ನ ಅರ್ಜಿದಾರ ಶಾಲೆಗಳ ನಡೆಯನ್ನು ತೀವ್ರವಾಗಿ ಆಕ್ಷೇಪಿಸಿದ ಹೈಕೋರ್ಟ್, ಶಾಲಾ ಕಟ್ಟಡ ಇದ್ದರೂ ಮಕ್ಕಳಿಗೆ ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲ. ಕ್ರೀಡಾ ಮೈದಾನ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ತಡೆಗೋಡೆ ಇಲ್ಲ. ಮೇಲಾಗಿ ಅಗ್ನಿ ಸುರಕ್ಷತೆ ಕ್ರಮಗಳನ್ನು ಅಳವಡಿಸಿ, ನಿರಾಕ್ಷೇಪಣಾ ಪತ್ರ ಪಡೆದುಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಾಲೆ ನಡೆಸಲು ಅಥವಾ ಮೇಲ್ದರ್ಜೆಗೇರಿಸಲು ಅನುಮತಿ ನೀಡಲು ಹೇಗೆ ಸಾಧ್ಯ ಎಂದು ಚಾಟಿ ಬೀಸಿತು.