ಸಮಗ್ರ ನ್ಯೂಸ್:ಹನ್ನೆರಡು ವರ್ಷಗಳ ಹಿಂದೆ ನಡೆದ ಸುಳ್ಯ ದ ಕೆ.ವಿ.ಜಿ. ಮೆಡಿಕಲ್ ಕಾಲೇಜು ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣ ಸಂಬಂಧಿಸಿ ಅ.5 ರಂದು ಹೈಕೋರ್ಟ್ ತೀರ್ಪು ನೀಡಿದ್ದು ಡಾ.ರೇಣುಕಾಪ್ರಸಾದ್ ಸೇರಿದಂತೆ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಪ್ರೊ.ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ಆರು ಆರೋಪಿಗಳನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಕಳೆದ ವಾರವಷ್ಟೆ ರದ್ದುಗೊಳಿಸಿದ್ದ ಹೈಕೋರ್ಟ್ ಅವರು ದೋಷಿಗಳೆಂದು ತೀರ್ಪು ನೀಡಿತ್ತು.
ಡಾ. ರೇಣುಕಾ ಪ್ರಸಾದ್ ಕೆ.ವಿ. ಸೇರಿದಂತೆ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ಪುತ್ತೂರಿನ ಐದನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಸರಕಾರ ಸಲ್ಲಿಸಿದ್ದ ಮೇಲ್ಮನವಿ ಪರಿಶೀಲಿಸಿದ್ದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಸೆ.27 ರಂದು ಈ ಆದೇಶ ನೀಡಿತ್ತು.
ಡಾ.ರೇಣುಕಾಪ್ರಸಾದ್ ಹಾಗೂ ಇತರೆ ಐವರು ಆರೋಪಿಗಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ಸಾಕ್ಷ್ಯಾಧಾರಗಳ ಸಮೇತ ದೃಢಪಟ್ಟಿದೆ ಎಂದು ತೀರ್ಮಾನಿಸಿದ್ದ ಹೈಕೋರ್ಟ್ ಎಲ್ಲರನ್ನೂ ಕೊಲೆ ಮತ್ತು ಅಪರಾಧಿಕ ಒಳಸಂಚು ಅಪರಾಧ ಕೃತ್ಯದಲ್ಲಿ ದೋಷಿಗಳನ್ನಾಗಿ ತೀರ್ಮಾನಿಸಿತ್ತು. ಆದರೆ ಏಳನೇ ಆರೋಪಿಯಾಗಿದ್ದ ಹೆಚ್.ಯು.ನಾಗೇಶ್ ಕುಮಾರ್ ಅವರನ್ನು ಖುಲಾಸೆಗೊಳಿಸಿದ ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.
ಅ.5ರಂದು ಕೋರ್ಟಿಗೆ ಶರಣಾಗಲು ಅಪರಾಧಿಗಳಿಗೆ ಸೂಚನೆ ನೀಡಿದ್ದ ನ್ಯಾಯಾಲಯ ಅಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ಹೇಳಿತ್ತು.
ಅದರಂತೆ ಅಪರಾಧಿಗಳು, ಪ್ರಕರಣದ ವಿಚಾರಣೆ ನಡೆದಿದ್ದ ಪುತ್ತೂರಿನಲ್ಲಿರುವ ಐದನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಬೇಕಿತ್ತು. ಆದರೆ ನ್ಯಾಯಾಧೀಶರು ರಜೆಯಲ್ಲಿರುವುದಿಂದ ಪ್ರಭಾರ ದಲ್ಲಿರುವ ಆರನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಬೇಕಾಯಿತು. ಅದರಂತೆ ಶರಣ್ ಹೊರತಾಗಿ ಇತರರು ಇಂದು ಅಪರಾಹ್ನ 2.30 ಕ್ಕೆ ಮಂಗಳೂರಿನಲ್ಲಿರುವ ಆರನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಹಾಜರಾದರು.
ವೀಡಿಯೋ ಕಾನ್ಪರೆನ್ಸ್ ಮೂಲಕ ಹೈ ಕೋರ್ಟ್ ನ್ಯಾಯಾಧೀಶರು ಅಪರಾಧಿಗಳ ಅಹವಾಲು ಆಲಿಸಿ ಬಳಿಕ ಶಿಕ್ಷೆಯ ತೀರ್ಪು ಪ್ರಕಟಿಸಿದರು.
ಅಪರಾಧಿಗಳಾದ ಡಾ.ರೇಣುಕಾಪ್ರಸಾದ್, ಮನೋಜ್ ರೈ, ಎಚ್.ಆರ್. ನಾಗೇಶ್, ವಾಮನ್ ಪೂಜಾರಿ, ಭವಾನಿಶಂಕರ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಲಾಯಿತು. ಇಂದು ಹಾಜರಾಗದ ಶರಣ್ ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿಲ್ಲ.
ಡಾ. ರೇಣುಕಾ ಪ್ರಸಾದ್ ಅವರಿಗೆ 10 ಲಕ್ಷ ರೂ. ದಂಡವೂ ವಿಧಿಸಲಾಗಿದ್ದು, ಅದನ್ನು ಕೊಲೆಗೀಡಾದ ರಾಮಕೃಷ್ಣ ಕುಟುಂಬಕ್ಕೆ ನೀಡುವಂತೆ ಆದೇಶಿಸಲಾಗಿದೆ.
2011 ಏಪ್ರಿಲ್ 28ರಂದು ಸಂಜೆ 7.45 ರ ವೇಳೆಗೆ ಸುಳ್ಯದ ಅಂಬಟೆಡ್ಕ ಬಳಿಯ ಶ್ರೀ ಕೃಷ್ಣ ಆಯುರ್ವೇದಿಕ್ ಥೆರಪಿ ಕ್ಲಿನಿಕ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ರಾಮಕೃಷ್ಣ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕೊಚ್ಚಿ ಕೊಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಒಟ್ಟು ಏಳು ಆರೋಪಿಗಳಿದ್ದು ಸಾಕ್ಷ್ಯಾಧಾರಗಳ ಕೊರತೆಯಿಂದ ಅವರೆಲ್ಲರನ್ನು ಖುಲಾಸೆಗೊಳಿಸಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 2016ರ ಅಕ್ಟೋಬರ್ 21ರಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಸರಕಾರ 2017ರಲ್ಲಿ ಹೈಕೋರ್ಟಿಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಲಾಗಿತ್ತು.