ಸಮಗ್ರ ನ್ಯೂಸ್: ಸುಳ್ಯ ನಗರದಲ್ಲಿ ಸೌಜನ್ಯ ಪ್ರಕರಣದ ಅನುಮತಿ ಪಡೆದು ಅಳವಡಿಸಿರುವ ಫ್ಲೆಕ್ಸ್ ಅನ್ನು ತೆರವುಗೊಳಿಸಿದ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬ್ಯಾನರ್ ತೆರವಿಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಪೊಲೀಸರೇ ಇದನ್ನು ಮುಂದೆ ನಿಂತು ಮಾಡಿಸಿದ್ದಾರೆ. ಅಂತಹ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸೌಜನ್ಯ ಪ್ರಕರಣ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯಿಂದ ಜಿಲ್ಲಾ ಪೊಲೀಸ್ ಅಧಿಕಾರಿ (ಎಸ್‌ಪಿ) ಸಿಬಿ ರಿಷ್ಯಂತ್ ಗೆ ಮನವಿ ಸಲ್ಲಿಸಲಾಗಿದೆ.

ಈ ಕುರಿತು ಲಿಖಿತ ದೂರು ನೀಡಿರುವ ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿ, ಸುಳ್ಯ ನಗರದಾದ್ಯಂತ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಫ್ಲೆಕ್ಸ್ ಅನ್ನು ಅನುಮತಿ ಪಡೆದು ಅಳವಡಿಸಲಾಗಿತ್ತು. ಆದರೆ ಸುಳ್ಯಕ್ಕೆ ಕಾರ್ಯಕ್ರಮ ನಿಮಿತ್ತ ರಾಜ್ಯ ಸಭಾ ಸದಸ್ಯರಾದ ಡಾ ಡಿ ವೀರೇಂದ್ರ ಹೆಗ್ಗಡೆಯವರು ಬರುವ ಕಾರಣ ಉದ್ದೇಶ ಪೂರ್ವಕವಾಗಿ ಮಂಗಳವಾರ(ಅ.03) ಬೆಳಗ್ಗೆ ನಗರ ಪಂಚಾಯತ್ ನವರು ಫ್ಲೆಕ್ಸ್ ಅನ್ನು ತೆರವುಗೊಳಿಸುತ್ತಾರೆ. ಅನುಮತಿ ಪಡೆದಿರುವ ದಾಖಲಾತಿಯನ್ನು ಲಗತ್ತಿಸಿದ್ದೇವೆ. ಉದ್ದೇಶ ಪೂರ್ವಕವಾಗಿ ನಮ್ಮ ಹೋರಾಟವನ್ನು ಹತ್ತಿಕ್ಕುವಂತಹ ಪ್ರಯತ್ನವನ್ನು ಮಾಡಲಾಗಿದೆ. ಇದನ್ನು ಒಕ್ಕಲಿಗರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಈ ಬಗ್ಗೆ ತಾವುಗಳು ವಿಚಾರಣೆಯನ್ನು ನಡೆಸಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಯನ್ನು ಕೂಡಲೇ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು, ಎಂದು ಒತ್ತಾಯಿಸಿದೆ.

ಬ್ಯಾನರ್ ಹಾಕುವುದಕ್ಕೆ ನಗರ ಪಂಚಾಯತ್ ನಿಂದ ಅನುಮತಿ ಪಡೆದಿದ್ದರೂ ತೆರವುಗೊಳಿಸಿದ್ದಾರೆ ಎಂದು ಅಧಿಕಾರಿಗಳ ನಡೆಗೆ ಸೌಜನ್ಯ ಪ್ರಕರಣ ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಿ.ಬಿ ಬಾಲಕೃಷ್ಣ ಅವರು ಖಂಡಿಸಿದ್ದರು. ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು. ಇದೀಗ ದಿಢೀರ್ ಬೆಳವಣಿಗೆ ಎಂಬಂತೆ ಅದೇ ಸ್ಥಳದಲ್ಲಿ ಸೌಜನ್ಯ ಪರ ಬ್ಯಾನರ್ ಅನ್ನು ಸಂಘಟಕರು ಅಳವಡಿಸಿದ್ದಾರೆ. ಈ ಬೆನ್ನಲ್ಲೇ ಸೌಜನ್ಯ ಪ್ರಕರಣ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿಯಿಂದ ದೂರು ಕೂಡ ದಾಖಲಾಗಿದೆ.
ದೂರನ್ನು ಸ್ವೀಕರಿಸಿರುವ ಎಸ್.ರಿಷ್ಯಂತ್ ಸಿ.ಬಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಒಕ್ಕಲಿಗ ಯುವ ಮುಖಂಡ ಕಿರಣ್ ಬುಡ್ಲೆಗುತ್ತು ತಿಳಿಸಿದ್ದಾರೆ.