ಸಮಗ್ರ ನ್ಯೂಸ್: ಸೌಜನ್ಯ ಪರ ನ್ಯಾಯಕ್ಕಾಗಿ ಆಗ್ರಹಿಸಿ ಐವರ್ನಾಡಿನಲ್ಲಿ ಅ. 8 ರಂದು ನಡೆಯಲಿರುವ ಪ್ರತಿಭಟನಾ ಸಭೆಯ ಕುರಿತು ಸುಳ್ಯ ಜ್ಯೋತಿ ವೃತ್ತದ ಬಳಿ ಅಳವಡಿಸಲಾಗಿದ್ದ ಒಂದು ಫ್ಲೆಕ್ಸನ್ನು ಇಂದು ಬೆಳಿಗ್ಗೆ ನಗರ ಪಂಚಾಯತ್‌ನವರು ತೆರವುಗೊಳಿಸಿದ್ದು, ಇದೀಗ ಆ ಫ್ಲೆಕ್ಸನ್ನು ಸಂಘಟಕರು ನ.ಪಂ.ನಿಂದ ವಾಪಾಸ್ ಪಡೆದು ಅದೇ ಸ್ಥಳದಲ್ಲಿ ಅಳವಡಿಸಿದ್ದಾರೆ.
ಸೆ. 26ರಂದು ನಗರ ಪಂಚಾಯತ್‌ನ ಅನುಮತಿ ಪಡೆದು ಈ ಫ್ಲೆಕ್ಸನ್ನು ಸೌಜನ್ಯ ಪರ ಹೋರಾಟ ಸಮಿತಿಯ ಅಧ್ಯಕ್ಷ ನಂದಕುಮಾರ್ ಬಾರೆತ್ತಡ್ಕ, ಕಾರ್ಯದರ್ಶಿ ರಾಜೇಶ್ ನೆಕ್ರೆಪ್ಪಾಡಿ ಮತ್ತು ಯುವಕರು ಅಳವಡಿಸಿದ್ದರು. ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ಸಮಿತಿ ವತಿಯಿಂದ ಬೃಹತ್ ಜನಜಾಗೃತಿ ಜಾಥಾ ಮತ್ತು ಗಾಂಧಿ ಸ್ಮೃತಿ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಪೊಲೀಸರ ಸಲಹೆಯ ಮೇರೆಗೆ ನ.ಪಂ.ನವರು ಜ್ಯೋತಿ ಸರ್ಕಲ್ ಬಳಿ ಇದ್ದ ಆ ಫ್ಲೆಕ್ಸನ್ನು ತೆಗೆಸಿದ್ದರು.
ಅನುಮತಿ ಪಡೆದು ಶುಲ್ಕ ಕಟ್ಟಿದ್ದರೂ ಫ್ಲೆಕ್ಸ್ ತೆಗೆದ ನ.ಪಂ. ಅಧಿಕಾರಿಗಳ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯತೊಡಗಿತ್ತು. ಫ್ಲೆಕ್ಸ್ ಅಳವಡಿಸಿದ್ದ ಪ್ರತಿಭಟನಾ ಸಭೆಯ ಸಂಘಟಕರು ನ.ಪಂ.ನವರನ್ನು ಆ ಬಗ್ಗೆ ಪ್ರಶ್ನಿಸಿದ್ದರೆನ್ನಲಾಗಿದೆ.
ಅಲ್ಲದೆ ಜಿಲ್ಲಾ ಮಟ್ಟದ ಸೌಜನ್ಯ ಪರ ಹೋರಾಟ ಸಮಿತಿಯ ಅಧ್ಯಕ್ಷ ಡಿ.ಬಿ.ಬಾಲಕೃಷ್ಣರು ನ.ಪಂ. ಮುಖ್ಯಾಧಿಕಾರಿಗೆ ಫೋನ್ ಮಾಡಿ ತರಾಟೆಗೆತ್ತಿಕೊಂಡಿದ್ದರು. ಸೌಜನ್ಯ ಪರ ಹೋರಾಟ ಸಮಿತಿಯ ಸಂಘಟಕರು ನ.ಪಂ.ಗೆ ಹೋಗಿ ಪ್ರಶ್ನಿಸಿದಾಗ ಫ್ಲೆಕ್ಸನ್ನು ನಾಳೆ ಅಳವಡಿಸಿಕೊಡುವುದಾಗಿ ಹೇಳಿದರೆನ್ನಲಾಗಿದೆ. ಅದನ್ನು ಒಪ್ಪದ ಸಂಘಟಕರು ಫ್ಲೆಕ್ಸನ್ನು ತಾವೇ ಪಡೆದು ಮತ್ತೆ ಅದೇ ಸ್ಥಳದಲ್ಲಿ ಅಳವಡಿಸಿದರೆಂದು ತಿಳಿದುಬಂದಿದೆ.